ಸೇಂಟ್ ಲೂಸಿಯಾ: ಕೆರೆಬಿಯನ್ ನಾಡಲ್ಲಿ ಟೀಂ ಇಂಡಿಯಾ ಕಮಾಲ್ ಮಾಡಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಮಿಂಚಿದ ಟೀಂ ಇಂಡಿಯಾ ಆಟಗಾರರು, 3ನೇ ಟೆಸ್ಟ್ ಪಂದ್ಯವನ್ನು 237 ರನ್ ಭಾರೀ ಗೆಲುವಿನ ಅಂತರದಿಂದ ಜಯಗಳಿಸುವ ಮೂಲಕ ಸರಣಿ ವಶಪಡಿಸಿಕೊಂಡಿದ್ದಾರೆ.
ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 353 ರನ್ ಗಳಿಸಿತ್ತು. 2ನೇ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿ, ವಿಂಡೀಸ್ ಗೆಲುವಿಗೆ 346 ರನ್ ಗುರಿ ನಿಗದಿಪಡಿಸಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ 225 ರನ್ ಗಳಿಸಿದ್ದ ವಿಂಡೀಸ್ 2ನೇ ಇನ್ನಿಂಗ್ಸ್ ನಲ್ಲಿ 108 ರನ್ ಗಳಿಗೆ ಆಲ್ ಔಟ್ ಆಯಿತು. ಡರೇನ್ ಬ್ರಾವೋ 59 ರನ್ ಗಳಿಸಿದರು. ಭಾರತದ ಪರ ಶಮಿ 3, ಇಶಾಂತ್ ಹಾಗೂ ಜಡೇಜ 2 ವಿಕೆಟ್ ಕಬಳಿಸಿದರು. ಈ ಮೂಲಕ ಭಾರತ 237 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿತು.
ವಿಂಡೀಸ್ ನೆಲದಲ್ಲಿ ಇದೇ ಮೊದಲ ಬಾರಿಗೆ ಭಾರತ 2 ಟೆಸ್ಟ್ ಪಂದ್ಯಗಳನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ. ಮೊದಲ ಪಂದ್ಯವನ್ನು ಗೆದ್ದಿದ್ದ ಭಾರತ ತಂಡ, 2ನೇ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಈಗ 3ನೇ ಪಂದ್ಯವನ್ನು ಗೆದ್ದು ಸರಣಿ ವಶಕ್ಕೆ ಪಡೆದಿದೆ. ಆಗಸ್ಟ್ 18ರಿಂದ 4ನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕರಾದ ನಂತರ, ಸತತ 3 ಸರಣಿಗಳನ್ನು ಟೀಂ ಇಂಡಿಯಾ ಜಯಿಸಿದೆ.