ಶ್ರೀನಗರ: ದೇಶಾದ್ಯಂತ ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಸಿದ್ಧತೆಗಳು ನಡೆದಿರುವಾಗಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಅವಘಢ ಸಂಭವಿಸಿದೆ. ಜನನಿಬಿಡ ಪ್ರದೇಶದಲ್ಲಿ ದುಷ್ಕರ್ಮಿಗಳು ಶಕ್ತಿಶಾಲಿ ಗ್ರೆನೇಡ್ ಸ್ಪೋಟಿಸಿದ್ದಾರೆ.
ಘಟನೆಯಲ್ಲಿ 10 ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದು, ಅವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಕಾಶ್ಮೀರದ ಪೂಂಚ್ ಮಾರ್ಕೇಟ್ ನಲ್ಲಿ ಜನ ಸೇರಿದ್ದ ಸಂದರ್ಭದಲ್ಲಿಯೇ ಶಕ್ತಿಶಾಲಿ ಗ್ರೆನೇಡ್ ಸ್ಪೋಟಗೊಂಡು, ದುರಂತ ಸಂಭವಿಸಿದೆ. ಸ್ಥಳಕ್ಕೆ ಸೇನೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಕಾಶ್ಮೀರದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ದೇಶದಲ್ಲಿ ಭಯೋತ್ಪಾದರ ದಾಳಿ ನಡೆಯಬಹುದಾದ ಸಾಧ್ಯತೆ ಇದೆ ಎಂದು ಅಮೆರಿಕ ಎಚ್ಚರಿಕೆ ನೀಡಿತ್ತು. ಗುಪ್ತಚರ ಇಲಾಖೆಯೂ ಈ ಬಗ್ಗೆ ರಾಜ್ಯಗಳಿಗೆ ಸೂಚನೆ ನೀಡಿತ್ತೆನ್ನಲಾಗಿದೆ. ಸಂಭ್ರಮಾಚರಣೆ ಆರಂಭವಾಗುವ ಮೊದಲೇ ದುಷ್ಕರ್ಮಿಗಳು ಗ್ರೆನೇಡ್ ಸ್ಪೋಟಿಸಿ ಆತಂಕ ಸೃಷ್ಠಿಸಿದ್ದಾರೆ.