ಬೆಂಗಳೂರು: ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು, ಪ್ರಿಯಕರನೊಂದಿಗೆ ಸೇರಿ, ಪತಿಯನ್ನೇ ಕ್ರೂರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆಗಸ್ಟ್ 11ರಂದು ನಿರ್ಜನ ಪ್ರದೇಶದಲ್ಲಿ ಗೋಣಿ ಚೀಲವೊಂದರಲ್ಲಿ ಶವ ಪತ್ತೆಯಾಗಿತ್ತು.
ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗೋಣಿ ಚೀಲವೊಂದರಿಂದ ದುರ್ವಾಸನೆ ಬರುತ್ತಿರುವುದಾಗಿ ಸಾರ್ವಜನಿಕರು ಮಾಹಿತಿ ನೀಡಿದಾಗ, ಪೊಲೀಸರು ಪರಿಶೀಲನೆ ನಡೆಸಿದ್ದು, ಚೀಲದಲ್ಲಿ ಶವ ಪತ್ತೆಯಾಗಿದೆ. ತನಿಖೆ ನಡೆಸಿದ ಪೊಲೀಸರು, ಮೃತ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಆತನ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಅಸಲಿ ಸಂಗತಿ ಬೆಳಕಿಗೆ ಬಂದಿದೆ. ಮಹಿಳೆ, ಅಂಜು ಎಂಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಗಿ ತಿಳಿಸಿದ್ದಾಳೆ.
ಸಂಬಂಧಕ್ಕೆ ಪತಿ ಅಡ್ಡಿಯಾಗುತ್ತಾನೆ ಎಂದು ಭಾವಿಸಿ, ಪ್ರಿಯಕರನೊಂದಿಗೆ ಸೇರಿ ಹತ್ಯೆ ಮಾಡಿದ್ದು, ಗೋಣಿ ಚೀಲದಲ್ಲಿ ಶವ ಹಾಕಿ ಪೊದೆಯಲ್ಲಿ ಎಸೆದು ಬಂದಿದ್ದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ ಎನ್ನಲಾಗಿದೆ. ನಾಪತ್ತೆಯಾಗಿರುವ ಪ್ರಿಯಕರನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.