ಸ್ಯಾಂಡಲ್ ವುಡ್ ಬಹುಬೇಡಿಕೆ ನಟರಲ್ಲಿ ಒಬ್ಬರಾಗಿರುವ ರಾಕಿಂಗ್ ಸ್ಟಾರ್ ಯಶ್, ಈಗಾಗಲೇ ಬಹು ನಿರೀಕ್ಷೆಯ ‘ಸಂತೂ ಸ್ಟ್ರೈಟ್ ಫಾರ್ವರ್ಡ್’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಜೊತೆಯಾಗಿ ನಟಿಸಿದ್ದಾರೆ.
ಸಂತೂ ಸ್ಟ್ರೈಟ್ ಫಾರ್ವರ್ಡ್’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಇದರೊಂದಿಗೆ ಯಶ್ ಸ್ಯಾಂಡಲ್ ವುಡ್ ಬಿಗ್ ಬಜೆಟ್ ಸಿನಿಮಾ ಎಂದೇ ಹೇಳಲಾಗುತ್ತಿರುವ ‘ಕೆ.ಜಿ.ಎಫ್’ ಚಿತ್ರದಲ್ಲಿ ನಟಿಸಲಿದ್ದು, ಇದಕ್ಕಾಗಿ ಪೂರ್ವ ತಯಾರಿಗಳು ನಡೆದಿವೆ. ಈ ನಡುವೆ ಯಶ್ ಅವರ ಹೊಸ ಚಿತ್ರದ ಕುರಿತಾದ ಮಾಹಿತಿಯೊಂದು ಹೊರ ಬಿದ್ದಿದೆ. ಎ.ಹರ್ಷ ನಿರ್ದೇಶನದ ಚಿತ್ರದಲ್ಲಿ ಯಶ್ ನಟಿಸಲಿದ್ದಾರೆ. ಇದು ಮುಂದಿನ ವರ್ಷ ಜನವರಿಯಲ್ಲಿ ಸೆಟ್ಟೇರಲಿದೆ ಎಂದು ಹೇಳಲಾಗಿದೆ.
ನೃತ್ಯ ನಿರ್ದೇಶಕರಾಗಿರುವ ಹರ್ಷ ಅವರು, ‘ಭಜರಂಗಿ’, ‘ಗೆಳೆಯ’, ‘ವಜ್ರಕಾಯ’ ‘ಮಾರುತಿ 800’ ಚಿತ್ರಗಳ ಮೂಲಕ ಯಶಸ್ವಿ ನಿರ್ದೇಶಕರಾಗಿದ್ದಾರೆ. ಅವರ ನಿರ್ದೇಶನದಲ್ಲಿ ಯಶ್ ‘ರಾಣಾ’ ಎಂಬ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಸಿಂಹಾದ್ರಿ ಪ್ರೊಡಕ್ಷನ್ಸ್ ನ ರಮೇಶ್ ಕಶ್ಯಪ್ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಯಶ್ ಹುಟ್ಟುಹಬ್ಬದ ದಿನದಂದು ಚಿತ್ರದ ಮುಹೂರ್ತ ನಡೆಯಲಿದೆ ಎಂದು ಹೇಳಲಾಗಿದೆ.