ಕೆಲವು ಪೊಲೀಸರು ಸಾರ್ವಜನಿಕರೊಂದಿಗೆ ದರ್ಪದ ವರ್ತನೆ ತೋರಿ ಇಲಾಖೆಗೆ ಕಳಂಕ ತರುತ್ತಿದ್ದಾರೆ. ಈ ರೀತಿ ಅನಾಗರಿಕ ವರ್ತನೆ ತೋರಿದ ಬಿಹಾರದ ಪೊಲೀಸನೊಬ್ಬನ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.
ಬಿಹಾರದ ಕಿಶನ್ ಪುರ್ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ ಪೆಕ್ಟರ್ ಅರವಿಂದ್ ಸಿಂಗ್ ಈ ರೀತಿಯ ನಡವಳಿಕೆ ತೋರಿದವನಾಗಿದ್ದು, ವಾಹನ ತಪಾಸಣೆ ವೇಳೆ ದಾಖಲಾತಿಗಳನ್ನು ಹೊಂದಿರಲಿಲ್ಲವೆಂಬ ಕಾರಣಕ್ಕೆ ಯುವಕನೊಬ್ಬನಿಗೆ ಅಶ್ಲೀಲವಾಗಿ ಬೈದಿರುವುದಲ್ಲದೇ ಬೆದರಿಕೆಯನ್ನೂ ಹಾಕಿದ್ದಾನೆ.
ಸ್ಥಳೀಯ ಬಿಜೆಪಿ ನಾಯಕರೊಬ್ಬರ ಪುತ್ರ ಜಯಂತ್ ಕುಮಾರ್ ಎಂಬಾತ ವಾಹನದಲ್ಲಿ ಬರುತ್ತಿದ್ದ ವೇಳೆ ತಪಾಸಣೆಗಾಗಿ ಪೊಲೀಸರು ವಾಹನವನ್ನು ತಡೆದು ನಿಲ್ಲಿಸಿದ್ದಾರೆ. ದಾಖಲಾತಿಗಳು ಮನೆಯಲ್ಲಿದ್ದು ತಂದು ತೋರಿಸುವುದಾಗಿ ಹೇಳಿದರೂ ಕೇಳಲು ತಯಾರಿಲ್ಲದ ಅರವಿಂದ್ ಸಿಂಗ್, ಅಶ್ಲೀಲ ಭಾಷೆಯಲ್ಲಿ ನಿಂದಿಸಿದ್ದಾರೆ. ಇದಕ್ಕೆ ಜಯಂತ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದಾಗ ಮತ್ತಷ್ಟು ಕೋಪಗೊಂಡ ಎಎಸ್ಐ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಇದರ ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಎಸ್ಐ ವಿರುದ್ದ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿ ಬಂದಿದೆ.