ಮನುಷ್ಯನಿಗೆ ವಯಸ್ಸಾದಂತೆಲ್ಲಾ ಅವನ ಸುತ್ತಲಿನ ಸಂಬಂಧಗಳ ಸರಪಳಿ ಕಳಚುತ್ತಾ ಹೋಗುತ್ತದೆ. ಮಕ್ಕಳ ಆದಿಯಾಗಿ ಎಲ್ಲರೂ ಅವರನ್ನು ದೂರವಿಡುತ್ತಾರೆ. ಆದರೆ ಬ್ರೆಜಿಲ್ ನ ಒಂದು ಪೆಂಗ್ವಿನ್ ತನ್ನ ದೊರೆಯನ್ನು ಕಾಣಲು 8 ಸಾವಿರ ಕಿ.ಮೀ. ದೂರ ಬರುತ್ತದೆ.
ಬ್ರೆಜಿಲ್ ನ 71 ವರ್ಷದ ವಿವಾವೋ ಪರೇರಾ ಡಿಸೋಜಾ ಮತ್ತು ಪೆಂಗ್ವಿನ್ ಮಧ್ಯೆ ಅಪಾರ ಪ್ರೀತಿಯಿದೆ. ವರ್ಷಕ್ಕೊಮ್ಮೆ ತನ್ನ ಯಜಮಾನನ್ನು ಕಾಣಲು ಬರುವ ಇದು ಡಿಸೋಕಾ ಅವರಿಗೊಂದು ಮುತ್ತನ್ನಿಕ್ಕಿ ಹೋಗುತ್ತದೆ. ಎಂಥಾ ಪ್ರೇಮ ಅಲ್ಲವೇ.
ಇಂಥಹ ಪ್ರೇಮದ ಹಿಂದೆ ಒಂದು ಕಥೆ ಇದೆ. ಕೆಲ ವರ್ಷದ ಹಿಂದೆ ಡಿಸೋಜಾ ಅವರು ರಿಯೋದ ಒಂದು ದ್ವೀಪದಲ್ಲಿ ನೆಲೆಸಿ ಮೇಸ್ತ್ರಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿದ ಬಳಿಕ ಮೀನುಗಳನ್ನು ಹಿಡಿದು ಮಾರಾಟ ಮಾಡುತ್ತಿದ್ದರು. 2011 ರಲ್ಲಿ ಒಮ್ಮೆ ಹೀಗೇ ಮೀನು ಹಿಡಿಯಲು ಹೋದಾಗ ಅವರಿಗೆ ಒಂದು ಪುಟಾಣಿ ಪೆಂಗ್ವಿನ್ ಚಡಪಡಿಸುತ್ತಿರುವುದು ಕಂಡುಬಂತು. ಅದರ ಮೈತುಂಬ ಎಣ್ಣೆ, ಕೆಸರು, ಡಾಂಬರು ಮೆತ್ತಿಕೊಂಡಿತ್ತು.
ಆ ಪೆಂಗ್ವಿನ್ ಅನ್ನು ಮನೆಗೆ ಕರೆತಂದ ಡಿಸೋಜಾ ಅದಕ್ಕೆ ಡಿಂಡಿಮ್ ಎಂದು ನಾಮಕರಣ ಮಾಡಿದರು. ಅದು ಪೂರ್ತಿಯಾಗಿ ಗುಣಮುಖವಾಗುವ ತನಕ ಅದನ್ನು ತನ್ನ ಬಳಿ ಇಟ್ಟುಕೊಂಡು ನಂತರ ಅದನ್ನು ಅದರ ಬಳಗಕ್ಕೆ ಮರಳಿಸಿದರು. ಇವರು ಡಿಂಡಿಮ್ ಅನ್ನು ಮರಳಿಸಿದ ಕೆಲವೇ ತಿಂಗಳಲ್ಲಿ ಅದು ಸಾವಿರಾರು ಕಿ.ಮೀ. ಕ್ರಮಿಸಿ ಡಿಸೋಜಾ ಅವರ ಬಳಿ ಬಂತು.
ಈಗ ವರ್ಷದ ಎಂಟು ತಿಂಗಳು ಡಿಂಡಿಮ್, ಡಿಸೋಜಾ ಅವರೊಡನೆ ಇರುತ್ತದೆ. ಉಳಿದ ದಿನಗಳಲ್ಲಿ ಅರ್ಜೆಂಟೀನಾದಲ್ಲಿ ವಾಸಿಸುತ್ತದೆ. ಡಿಂಡಿಮ್ ನನ್ನು ನಾನು ಮಕ್ಕಳಂತೆಯೇ ಸಾಕುತ್ತೇನೆ. ಅದಕ್ಕೂ ಕೂಡ ನನ್ನ ಮೇಲೆ ಇದೇ ರೀತಿಯ ಭಾವನೆ ಇದೆ ಎಂಬುದು ಈಗ ನನಗೆ ತಿಳಿದಿದೆ ಎನ್ನುತ್ತಾರೆ ಡಿಸೋಜಾ. ಮನುಷ್ಯ, ಸಂಬಂಧಗಳಿಗೆ ಬೆಲೆ ಕೊಡದಿದ್ದರೂ ಪ್ರಾಣಿಗಳು ಬೆಲೆಕೊಡುತ್ತವೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಇನ್ನೇನು ಬೇಕು?