ಉಡುಪಿಯ ಖ್ಯಾತ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಶದಲ್ಲಿದ್ದ ಆರೋಪಿ 26 ವರ್ಷದ ನಿರಂಜನ್ ಭಟ್ ತನ್ನ ಕೈ ಬೆರಳಿನಲ್ಲಿದ್ದ ವಜ್ರದ ಉಂಗುರವನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ಈಗ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೌದಿ ಅರೇಬಿಯಾದಲ್ಲಿ 6 ಸೂಪರ್ ಮಾರ್ಕೇಟ್, ಉಡುಪಿಯಲ್ಲಿ 2 ಬಹುಮಹಡಿ ಕಟ್ಟಡಗಳು ಸೇರಿದಂತೆ ಸುಮಾರು 200 ಕೋಟಿ ರೂ. ಆಸ್ತಿಯ ಒಡೆಯರಾಗಿದ್ದ ಭಾಸ್ಕರ್ ಶೆಟ್ಟಿ, ಜುಲೈ 28ರಿಂದ ಕಾಣೆಯಾಗಿದ್ದು, ಅವರ ತಾಯಿ ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರಿಗೆ ಆಸ್ತಿಗಾಗಿ ಭಾಸ್ಕರ ಶೆಟ್ಟಿ ಅವರ ಪತ್ನಿ ರಾಜೇಶ್ವರಿ ಹಾಗೂ ಪುತ್ರ ನವನೀತ ಶೆಟ್ಟಿ ಅವರೇ ನಿರಂಜನ್ ಭಟ್ ಸಹಾಯದಿಂದ ಕೊಲೆ ಮಾಡಿದ್ದಾರೆ ಎಂಬುದು ತಿಳಿದುಬಂದಿತ್ತು.
ರಾಜೇಶ್ವರಿ ಹಾಗೂ ನವನೀತ್ ರನ್ನು ಬಂಧಿಸಿದ್ದ ಪೊಲೀಸರು, ನಿರಂಜನ್ ಭಟ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈತ ಪೊಲೀಸರ ವಶದಲ್ಲಿದ್ದಾಗಲೇ ವಜ್ರದುಂಗುರ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದು, ಇದೀಗ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ನಿರಂಜನ್ ಭಟ್ ಪ್ರಾಣಾಪಾಯದಿಂದ ಪಾರಾಗಿದ್ದಾನೆಂದು ಹೇಳಲಾಗಿದೆ.