ಬಾಲಿವುಡ್ ನಲ್ಲಿ ಇದೇ ಆಗಸ್ಟ್ 12 ರಂದು 2 ಬಹು ನಿರೀಕ್ಷೆಯ ಚಿತ್ರಗಳು ರಿಲೀಸ್ ಆಗಲಿವೆ. ಅಕ್ಷಯ್ ಕುಮಾರ್ ನಟಿಸಿರುವ ರಿಯಾಲಿಸ್ಟಿಕ್ ಕತೆ ಹೊಂದಿರುವ ‘ರುಸ್ತುಂ’ ಈಗಾಗಲೇ ಟ್ರೈಲರ್ ನಿಂದಲೇ ಭಾರೀ ನಿರೀಕ್ಷೆ ಮೂಡಿಸಿದೆ.
‘ರುಸ್ತುಂ’ ಶುಕ್ರವಾರ ತೆರೆ ಕಾಣಲಿದ್ದು, ಇದೇ ದಿನ ಅಶುತೋಷ್ ಗೋವಾರಿಕರ್ ನಿರ್ದೇಶನದ ಹೃತಿಕ್ ರೋಷನ್ ನಟಿಸಿರುವ ‘ಮೆಹಂಜೊ ದಾರೊ’ ಕೂಡ ಬಿಡುಗಡೆಯಾಗುತ್ತಿದೆ. ಇತಿಹಾಸದ ಕಥಾ ಹಂದರ ಹೊಂದಿರುವ ‘ಮೆಹಂಜೊ ದಾರೊ’ ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿದ್ದು, ಕನ್ನಡತಿ ಪೂಜಾ ಹೆಗ್ಡೆ ಈ ಚಿತ್ರದಲ್ಲಿ ನಾಯಕಿಯಾಗಿದ್ದಾರೆ. ‘ಮೆಹಂಜೊ ದಾರೊ’ ಬಿಡುಗಡೆಗೂ ಮೊದಲೇ ಗಳಿಕೆಯಲ್ಲಿ ದಾಖಲೆ ಬರೆದಿದೆ. ಈ ಚಿತ್ರದ ಸ್ಯಾಟ್ ಲೈಟ್ ಹಕ್ಕು ಬರೋಬ್ಬರಿ 45 ಕೋಟಿ ರೂ.ಗೆ ಮಾರಾಟವಾಗಿದೆ.
ಸ್ಯಾಟ್ ಲೈಟ್ ರೈಟ್ಸ್ ನಿಂದಲೇ 45 ಕೋಟಿ ರೂ.ಗಳಿಸಿದ ‘ಮೆಹಂಜೊ ದಾರೊ’ ಆಡಿಯೋ ರೈಟ್ಸ್ ನಿಂದ 15 ಕೋಟಿ ರೂ. ಗಳಿಸಿದೆ. ಭರ್ಜರಿ ಯಶಸ್ಸು ಕಂಡ ‘ಲಗಾನ್’ ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಿಸಿರುವ ಅಶುತೋಶ್ ಗೋವಾರಿಕರ್ ‘ಮೆಹಂಜೊ ದಾರೊ’ ನಿರ್ದೇಶನ ಮಾಡಿದ್ದು, ಚಿತ್ರ ನಿರೀಕ್ಷೆ ಮೂಡಿಸಿದೆ.