ಬೆಂಗಳೂರು: ಮಗಳು ಪ್ರಿಯಕರನೊಂದಿಗೆ ಹೋಗಿದ್ದರಿಂದ ಮಾನ, ಮರ್ಯಾದೆ ಹೋಗುತ್ತದೆ ಎಂದು ಅಂಜಿ ವಿಷ ಸೇವಿಸಿದ್ದ ದಂಪತಿ ಸಾವನ್ನಪ್ಪಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಕರನನ್ನು ಬಂಧಿಸಲಾಗಿದೆ.
ಪೀಣ್ಯದ ಮಣಿಚಂದ್ರ ಹಾಗೂ ಸುಜಾತ ದಂಪತಿಯ ಪುತ್ರಿ ರಶ್ಮಿ ತಮ್ಮ ಮನೆಯಲ್ಲಿ ಬಾಡಿಗೆಗೆ ಇದ್ದ ಶ್ರೀಧರ್ ಜೊತೆಗೆ ಹೋಗಿದ್ದು, ಇದರಿಂದ ಮನನೊಂದ ದಂಪತಿ ವಿಷ ಸೇವಿಸಿದ್ದರು. ಸುಜಾತ ಮೊದಲೇ ಮೃತಪಟ್ಟರೆ, ಮಣಿಚಂದ್ರ ಮರುದಿನ ಸಾವು ಕಂಡಿದ್ದರು. ತಂದೆಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ರಶ್ಮಿ ಬಂದ ಸಂದರ್ಭದಲ್ಲಿ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಂದೆ, ತಾಯಿ ಸಾವಿಗೆ ನೀನೇ ಕಾರಣ ಎಂದೆಲ್ಲಾ ದೂರಿದ್ದಾರೆ.
ಬಳಿಕ ಪೊಲೀಸ್ ಭದ್ರತೆಯಲ್ಲಿಯೇ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡ ರಶ್ಮಿ ಅಲ್ಲಿಂದ ಹೋಗಿದ್ದಾಳೆ. ಮೃತರ ಸಂಬಂಧಿಯೊಬ್ಬರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾನೆಂದು ಶ್ರೀಧರ್ ವಿರುದ್ಧ ದೂರು ನೀಡಿದ್ದು, ಕೇಸ್ ದಾಖಲಿಸಿಕೊಂಡ ಪೊಲೀಸರು ಶ್ರೀಧರ್ ನನ್ನು ಬಂಧಿಸಿದ್ದಾರೆ.