ನವದೆಹಲಿ: ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಜೀವನ ನಡೆಸುವುದೇ ಕಷ್ಟಸಾಧ್ಯವಾಗಿದೆ. ಅದರಲ್ಲಿಯೂ ಅಗತ್ಯ ವಸ್ತುಗಳ ಬೆಲೆ ದಿನದಿಂದ ಏರಿಕೆಯಾಗುತ್ತಿದ್ದು, ಇದರೊಂದಿಗೆ ತೈಲ ಬೆಲೆಯಲ್ಲಿಯೂ ಹೆಚ್ಚಳವಾಗಿದೆ.
ಒಂದೇ ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಹೆಚ್ಚಳ ಮಾಡಲಾಗಿದೆ. ಪೆಟ್ರೋಲ್ ಬೆಲೆ ಲೀಟರ್ ಗೆ 83 ಪೈಸೆ, ಡೀಸೆಲ್ ಬೆಲೆ ಲೀಟರ್ ಗೆ 1.26 ರೂ ಏರಿಕೆಯಾಗಿದೆ. ಸೋಮವಾರ ಮಧ್ಯರಾತ್ರಿಯಿಂದಲೇ ನೂತನ ದರಗಳು ಜಾರಿಗೆ ಬಂದಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆ ಏರಿಳಿತ ಆಧರಿಸಿ ದೇಶೀಯ ಮಾರುಕಟ್ಟೆಯಲ್ಲಿ ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ಬೆಲೆಯನ್ನು ಪರಿಷ್ಕರಿಸುತ್ತವೆ.
ಭಾರತಕ್ಕೆ ಕಚ್ಛಾತೈಲ ರಫ್ತು ಮಾಡುತ್ತಿದ್ದ ಇರಾಕ್ ತೈಲ ಕಂಪನಿಗಳು ಶುಲ್ಕ ವಿನಾಯಿತಿ ತೆಗೆದುಹಾಕಿದ್ದು, ಇದರಿಂದಾಗಿ ದೇಶೀಯ ತೈಲೋತ್ಪನ್ನ ಸಂಸ್ಥೆಗಳೇ ಶುಲ್ಕ ಪಾವತಿ ಮಾಡಬೇಕಿದೆ. ಈ ಹಿನ್ನಲೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಹೆಚ್ಚಳ ಮಾಡಲಾಗಿದೆ.
ಮೇ 1 ರಂದು ಪೆಟ್ರೋಲ್ ಲೀಟರ್ ಗೆ 1.6 ರೂ., ಡೀಸೆಲ್ 2.94 ರೂ. ಏರಿಕೆಯಾಗಿತ್ತು. ಇದೀಗ ಮತ್ತೆ ಏರಿಕೆಯಾಗಿದ್ದು, ಪೆಟ್ರೋಲ್ ಲೀಟರ್ ಗೆ 83 ಪೈಸೆ, ಡೀಸೆಲ್ ಲೀಟರ್ ಗೆ 1.26 ರೂ ಏರಿಕೆ ಮಾಡಲಾಗಿದೆ.