ಕೊಚ್ಚಿಯಿಂದ ಮುಂಬೈಗೆ ತೆರಳುತ್ತಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ ಸುಮಾರು 40 ಮಂದಿ ಪ್ರಯಾಣಿಕರನ್ನು ಬಿಟ್ಟು ಹೊರಟ ವೇಳೆ ಪ್ರಯಾಣಿಕರು ಗಲಾಟೆ ಆರಂಭಿಸಿದ ಕಾರಣ ವಿಮಾನ ವಾಪಾಸ್ ಕರೆಸಿ ಅವರುಗಳನ್ನು ಹತ್ತಿಸಿಕೊಂಡು ಹೋದ ಘಟನೆ ನಡೆದಿದೆ.
ವಿಮಾನ ನಿಲ್ದಾಣದ ಟರ್ಮಿನಲ್ ನಿಂದ ವಿಮಾನದವರೆಗೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಬಸ್, ಏಕಾಏಕಿ ಬಿರು ಮಳೆ ಆರಂಭವಾದ ಕಾರಣ ಅರ್ಧದಲ್ಲೇ ನಿಂತಿದೆ. ಅದೇ ಸಮಯದಲ್ಲಿ ಮುಂಬೈಗೆ ಹೋಗಬೇಕಿದ್ದ ಸ್ಪೈಸ್ ಜೆಟ್ ವಿಮಾನ ತಮ್ಮ ಕಣ್ಣೆದುರೆ ಚಾಲನೆಗೊಂಡು ಹಾರಾಟಕ್ಕೆ ರನ್ ವೇ ನಲ್ಲಿ ಸಾಗುತ್ತಿರುವುದು ಪ್ರಯಾಣಿಕರಿಗೆ ಕಂಡು ಬಂದಿದೆ.
ಕಡೆಗೆ ಬಸ್ ನಿಂದ ಇಳಿದ ಪ್ರಯಾಣಿಕರು ಸ್ಪೈಸ್ ಜೆಟ್ ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ವಿಮಾನ ಇನ್ನೂ ರನ್ ವೇ ನಲ್ಲೇ ಸಾಗುತ್ತಿದ್ದ ಕಾರಣ ಪೈಲಟ್ ಗೆ ಸಂದೇಶ ರವಾನಿಸಿ ವಾಪಾಸ್ ಬರುವಂತೆ ಸೂಚಿಸಲಾಗಿದೆ. ಕಡೆಗೂ ವಾಪಾಸ್ ಮರಳಿದ ವಿಮಾನ ಪ್ರಯಾಣಿಕರನ್ನು ಹತ್ತಿಸಿಕೊಂಡು ಮುಂಬೈಗೆ ತೆರಳಿದೆ. ಸುಮಾರು 40 ಕ್ಕಿಂತ ಅಧಿಕ ಪ್ರಯಾಣಿಕರು ಬಾರದಿರುವುದನ್ನು ಗಮನಿಸಿ ಕಡೇ ಪಕ್ಷ ಕಾರಣ ತಿಳಿದುಕೊಳ್ಳಲು ಮುಂದಾಗುವುದರ ಬದಲು ವಿಮಾನ ಹಾರಾಟಕ್ಕೆ ಅನುವು ಮಾಡಿಕೊಟ್ಟಿದ್ದಕ್ಕಾಗಿ ಸ್ಪೈಸ್ ಜೆಟ್ ಸಿಬ್ಬಂದಿ ವಿರುದ್ದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.