ಕೋಲಾರ: ಅಸ್ಸಾಂನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟಿದ್ದ ಕೋಲಾರದ ವೀರ ಯೋಧ 24 ವರ್ಷದ ರಾಜೇಶ್ ಮೃತದೇಹ ಇಂದು ಸ್ವಗ್ರಾಮಕ್ಕೆ ಆಗಮಿಸಿದ್ದು, ವೀರಯೋಧನಿಗೆ ಗ್ರಾಮಸ್ಥರು, ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ವತಿಯಿಂದ ಅಂತಿಮ ನಮನ ಸಲ್ಲಿಸಲಾಯಿತು.
ಕೋಲಾರ ತಾಲ್ಲೂಕಿನ ಕಿತ್ತಂಡೂರು ಗ್ರಾಮದಲ್ಲಿ ಶೋಕ ಮಡುಗಟ್ಟಿದ್ದು, ಗ್ರಾಮದ ಶಾಲೆಯ ಸಮೀಪ ಅಂತ್ಯ ಸಂಸ್ಕಾರ ನಡೆಸಲು, ಹಿರಿಯರೆಲ್ಲಾ ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಕಿತ್ತಂಡೂರಿನ ರಾಮಪ್ಪ ಮತ್ತು ರಾಮಕ್ಕ ದಂಪತಿಯ 3ನೇ ಪುತ್ರರಾಗಿರುವ ರಾಜೇಶ್ ಕುಟುಂಬಕ್ಕೆ ಆಧಾರವಾಗಿದ್ದರು. ಗ್ರಾಮದಲ್ಲಿ ಎಲ್ಲರೊಂದಿಗೂ ಬೆರೆಯುತ್ತಿದ್ದರು. ಅವರು ಕೆ.ಜಿ.ಎಫ್.ನಲ್ಲಿ ಐ.ಟಿ.ಐ ಮುಗಿಸಿದ ನಂತರ, 3 ವರ್ಷಗಳ ಹಿಂದೆ ಸೇನೆಗೆ ಸೇರಿದ್ದರು ಎನ್ನಲಾಗಿದೆ.
ಬಿ.ಎಸ್.ಎಫ್. ಯೋಧರಾಗಿದ್ದ ರಾಜೇಶ್, ಅಸ್ಸಾಂನಲ್ಲಿ ನಡೆದ ದುರಂತದಲ್ಲಿ ಮೃತಪಟ್ಟಿದ್ದು, ಅವರ ಮೃತದೇಹವನ್ನು ಸ್ವಗ್ರಾಮ ಕಿತ್ತಂಡೂರಿಗೆ ತಂದು ಅಂತಿಮ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸೇನೆಯ ಅಧಿಕಾರಿಗಳು, ಸ್ಥಳೀಯ ಮುಖಂಡರು, ಅಧಿಕಾರಿಗಳು ಇದ್ದರು.