ಜಾರ್ಖಂಡದ ತೆತರ್ಟೋಲಿ, ಕಂಜಿಯಾ ಮುಂತಾದೆಡೆ ಭೂತ, ಮಾಟ ಮಂತ್ರದ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಯನ್ನು ತಡೆಗಟ್ಟಲು ಶಾಲಾ ಮಕ್ಕಳ ಪಠ್ಯದಲ್ಲೇ ಅದನ್ನು ಅಳವಡಿಸಲಾಗುತ್ತಿದೆ.
ಅಲ್ಲಿ ಈಗಾಗಲೇ ಮೂಢನಂಬಿಕೆಯ ಹೆಸರಿನಲ್ಲಿ ಅನೇಕ ಜನರ ಪ್ರಾಣಹಾನಿಯಾಗಿದೆ. ಹಾಗಾಗಿ ಮಕ್ಕಳಿಗೆ ಭೂತ, ಮಾಟಮಂತ್ರದ ಕುರಿತಾಗಿ ಮಾಹಿತಿ ನೀಡಿದರೆ ಅವರಲ್ಲಿ ಅದರ ಬಗ್ಗೆ ಅರಿವು ಮೂಡುತ್ತದೆ. ಮುಂದಿನ ಜನಾಂಗವಾದರೂ ಮೂಢನಂಬಿಕೆಗಳಿಂದ ಹೊರಬರಲಿ ಎಂದು ಈ ಕ್ರಮ ಕೈಗೊಳ್ಳಲಾಗುತ್ತಿದೆ.
ಊರಿನ ಅನೇಕ ಮಂದಿ ಅನಕ್ಷರಸ್ಥರು ಮತ್ತು ವೃದ್ದರೇ ಆಗಿದ್ದಾರೆ. ಹಾಗಾಗಿ ಅವರು ಹಿಂದಿನಿಂದ ಉಳಿಸಿಕೊಂಡ ನಂಬಿಕೆಯಲ್ಲೇ ಬದುಕುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸುಮಾರು 35 ಮಂದಿ ಮಹಿಳೆಯರನ್ನು ದೆವ್ವ, ಭೂತದ ಕಾರಣದಿಂದ ಸಾಯಿಸಲಾಗಿದೆ. ಕಳೆದ 5 ವರ್ಷದಲ್ಲಿ ಸುಮಾರು 3,300 ಕೊಲೆ ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ಆದಿವಾಸಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ನಂಬಿಕೆಗಳ ದಾಸರಾಗಿದ್ದಾರೆ.
ಮೂಢನಂಬಿಕೆಯಿಂದ ಅನೇಕ ಮಹಿಳೆಯರನ್ನು ಕ್ರೂರವಾಗಿ ಸಾಯಿಸಲಾಗುತ್ತದೆ. ಅನೇಕ ಕುಟುಂಬಗಳು ಬಹಿಷ್ಕಾರಗೊಳ್ಳುತ್ತವೆ ಮತ್ತು ಬೆದರಿಕೆಗಳನ್ನು ಎದುರಿಸಬೇಕಾಗುತ್ತದೆ. ಪೊಲೀಸರು ಇಂತಹ ನಂಬಿಕೆಗಳಿಗೆ ಅಡ್ಡಗಾಲು ಹಾಕುತ್ತಾರೆಂದು ಪೊಲೀಸರನ್ನು ಕೂಡ ದ್ವೇಷಿಸಲಾಗುತ್ತಿದೆ. ಜಗತ್ತು, ತಂತ್ರಜ್ಞಾನ ಇಷ್ಟೆಲ್ಲಾ ಮುಂದುವರೆದರೂ ಇವರು ಮಾತ್ರ ಮೂಢನಂಬಿಕೆಯ ನೆಪದಲ್ಲಿ ಕೊಲೆಯ ಮೇಲೆ ಕೊಲೆ ಮಾಡುತ್ತಲೇ ಇದ್ದಾರೆ.