ಕಳೆದ ವರ್ಷದ ಜುಲೈನಲ್ಲಿ ಬಿಡುಗಡೆಯಾಗಿದ್ದ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರ, ಗಳಿಕೆಯಲ್ಲಿ ಹೊಸ ದಾಖಲೆಯನ್ನು ಬರೆಯುವ ಮೂಲಕ ಅತ್ಯಧಿಕ ಗಳಿಕೆ ಮಾಡಿದ ದಕ್ಷಿಣ ಭಾರತದ ಪ್ರಥಮ ಚಿತ್ರವೆಂಬ ಹೆಗ್ಗಳಿಕೆ ಪಡೆದಿತ್ತು.
ಇದೀಗ ‘ಬಾಹುಬಲಿ 2’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಇದರಲ್ಲಿ ಪ್ರೇಕ್ಷಕರ ಬಹು ಕುತೂಹಲದ ಪ್ರಶ್ನೆ, ಕಟ್ಟಪ್ಪ ಬಾಹುಬಲಿಯನ್ನೇಕೆ ಕೊಂದ ಎಂಬುದಕ್ಕೆ ಉತ್ತರ ಸಿಗಲಿದೆ ಎನ್ನಲಾಗಿದೆ. ‘ಬಾಹುಬಲಿ 2’ ಚಿತ್ರದ ಬಿಡುಗಡೆ ದಿನಾಂಕವನ್ನು ಈಗಾಗಲೇ ಅಧಿಕೃತವಾಗಿ ಪ್ರಕಟಿಸಲಾಗಿದ್ದು, 2017 ರ ಏಪ್ರಿಲ್28 ರಂದು ಚಿತ್ರ ದೇಶ- ವಿದೇಶಗಳಲ್ಲಿ ತೆರೆ ಕಾಣಲಿದೆ.
ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ, ಸತ್ಯರಾಜ್ ಪ್ರಮುಖ ತಾರಾಗಣದಲ್ಲಿರುವ ಈ ಚಿತ್ರದ ಕುರಿತ ಮತ್ತೊಂದು ಕುತೂಹಲಕಾರಿ ಮಾಹಿತಿ ಹೊರ ಬಿದ್ದಿದ್ದು, ಬಿಡುಗಡೆಗೂ ಮುನ್ನವೇ ‘ಬಾಹುಬಲಿ 2’ 350 ಕೋಟಿ ರೂ. ಗಳಿಕೆ ಮಾಡಿದೆ ಎನ್ನಲಾಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಬಾಲಿ’ ಚಿತ್ರ ಬಿಡುಗಡೆಗೂ ಮುನ್ನ 200 ಕೋಟಿ ರೂ. ಗಳಿಕೆ ಮಾಡಿದ್ದು, ಇದೀಗ ಆ ದಾಖಲೆಯನ್ನು ‘ಬಾಹುಬಲಿ 2’ ಮುರಿದಿದೆ.