ಬೀಜಿಂಗ್: ಗಂಡ, ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತು ಹಳೆದಾಯ್ತು. ಈಗೇನಿದ್ದರೂ, ದಂಪತಿಯ ನಡುವೆ ನಿತ್ಯವೂ ಜಗಳ ನಡೆಯುತ್ತಿರುತ್ತದೆ. ಹೀಗೆ ಜಗಳ ವಿಕೋಪಕ್ಕೆ ತಿರುಗಿ ಏನೆಲ್ಲಾ ಅನಾಹುತವಾಗಿದೆ ಎಂಬುದನ್ನು ಹಲವು ಪ್ರಕರಣಗಳಲ್ಲಿ ನೋಡಿರುತ್ತೀರಿ.
ಹೀಗೆ ಗಂಡ, ಹೆಂಡತಿ ಜಗಳದಿಂದ ಹೆಂಡತಿಯ ತಾಯಿ ಹುಲಿಗೆ ಬಲಿಯಾದ ಘಟನೆ ಚೀನಾದಲ್ಲಿ ನಡೆದಿದೆ. ಭಾನುವಾರ ಬೀಜಿಂಗ್ ಸಮೀಪದ ಬದಾಲಿಂಗ್ ರಾಷ್ಟ್ರೀಯ ಉದ್ಯಾನವನಕ್ಕೆ ಕುಟುಂಬವೊಂದು ಬಂದಿದ್ದು, ಈ ಸಂದರ್ಭದಲ್ಲಿ ಗಂಡ, ಹೆಂಡತಿ ನಡುವೆ ಜಗಳ ನಡೆದಿದೆ. ಸಿಟ್ಟಾದ ಪತ್ನಿ ಕಾರಿನಿಂದ ಕೆಳಗೆ ಇಳಿದಿದ್ದು, ಅಲ್ಲೇ ಅವಿತು ಕುಳಿತಿದ್ದ ಹುಲಿ ಆಕೆಯನ್ನು ಎಳೆದುಕೊಂಡು ಹೋಗಿದೆ. ಇದನ್ನು ಕಂಡ ಆಕೆಯ ತಾಯಿ ಕೆಳಗೆ ಇಳಿದಿದ್ದು, ಮತ್ತೊಂದು ಹುಲಿ ಎಳೆದೊಯ್ದು ಕೊಂದು ಹಾಕಿದೆ.
ಪತ್ನಿಯನ್ನು ಉದ್ಯಾನವನದ ಸಿಬ್ಬಂದಿ ರಕ್ಷಿಸಿದ್ದಾರೆ. ಆಕೆಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ರಕ್ಷಿಸಲು ಹೋದ ತಾಯಿ, ಹುಲಿಗೆ ಬಲಿಯಾಗಿದ್ದಾರೆ. ಈ ಪ್ರದೇಶದಲ್ಲಿ ವಾಹನ ನಿಲ್ಲಿಸಿ ಕೆಳಗೆ ಇಳಿಯದಂತೆ ಸೂಚನೆ ಇದ್ದರೂ, ಗಂಡ, ಹೆಂಡತಿ ಜಗಳ ತಾರಕಕ್ಕೇರಿ ಈ ದುರ್ಘಟನೆ ಸಂಭವಿಸಿದೆ.