ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿದೆ. ಬ್ಯಾಟಿಂಗ್, ಬೌಲಿಂಗ್ ನಲ್ಲಿ ಪಾರಮ್ಯ ಮೆರೆದ ಭಾರತದ ಆಟಗಾರರು ಮೊದಲ ಟೆಸ್ಟ್ ನಲ್ಲಿ ಜಯಗಳಿಸಿದ್ದಾರೆ.
ಏಷ್ಯಾದ ಹೊರಗಿನ ಪಿಚ್ ಗಳಲ್ಲಿ ಭಾರತ ಗಳಿಸಿದ ದೊಡ್ಡ ಗೆಲವು ಇದಾಗಿದ್ದು, ಇನ್ನಿಂಗ್ಸ್ ಹಾಗೂ 92 ರನ್ ಅಂತರದಿಂದ ವಿಂಡೀಸ್ ಅನ್ನು ಬಗ್ಗು ಬಡಿದಿದೆ. ಆರ್. ಅಶ್ವಿನ್ ಅಮೋಘ ಆಟ ಪ್ರದರ್ಶಿಸಿದ್ದಾರೆ. ಫಾಲೋ ಆನ್ ಪಡೆದು, 1 ವಿಕೆಟ್ ನಷ್ಟಕ್ಕೆ 21 ರನ್ ಗಳಿಸಿದ್ದ ವೆಸ್ಟ್ ಇಂಡೀಸ್, 4ನೇ ದಿನದಲ್ಲಿ ಭೋಜನ ವಿರಾಮದ ವೇಳೆಗೆ 2 ವಿಕೆಟ್ ಕಳೆದುಕೊಂಡು 76 ರನ್ ಗಳಿಸಿತ್ತು. 132 ರನ್ ಗಳಿಸುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 161.5 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 566 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ ನಲ್ಲಿ 243 ರನ್ ಗಳಿಗೆ ಆಲ್ ಔಟ್ ಆಗಿ, ಫಾಲೋ ಆನ್ ಪಡೆದು, 2ನೇ ಇನ್ನಿಂಗ್ಸ್ ನಲ್ಲಿ 231 ರನ್ ಗಳಿಗೆ ಆಲ್ ಔಟ್ ಆಗಿದೆ. ಈ ಮೂಲಕ ಭಾರತ ಇನ್ನಿಂಗ್ಸ್ ಹಾಗೂ 92 ರನ್ ಅಂತರದಿಂದ ಜಯಗಳಿಸಿದೆ. ವಿರಾಟ್ ಕೊಹ್ಲಿ ನಾಯಕನಾಗಿ ಮತ್ತೆ ಕಮಾಲ್ ಮಾಡಿದ್ದಾರೆ.