ತನ್ನ ಅಜ್ಜಿಯೊಂದಿಗೆ ಹೊಲದಿಂದ ಬರುತ್ತಿದ್ದ ವೇಳೆ ಬೋರ್ ವೆಲ್ ಗೆ ಬಿದ್ದಿದ್ದ ಮಧ್ಯ ಪ್ರದೇಶದ ಗ್ವಾಲಿಯರ್ ನ ಮೂರು ವರ್ಷದ ಬಾಲಕನನ್ನು ರಕ್ಷಿಸಲು ಸತತ ಪ್ರಯತ್ನ ನಡೆಸಲಾಗಿತ್ತಾದರೂ ಕೊನೆಗೂ ಬಾಲಕ ದುರಂತ ಸಾವನ್ನಪ್ಪಿದ್ದಾನೆ.
ಬೋರ್ ವೆಲ್ ಗೆ ಬಿದ್ದಿದ್ದ ಬಾಲಕ 30 ರಿಂದ 35 ಅಡಿ ಆಳದಲ್ಲಿ ಸಿಕ್ಕಿ ಬಿದ್ದಿದ್ದ. ಆತನ ಚಲನವಲನ ಅರಿಯಲು ಕ್ಯಾಮರಾವನ್ನು ಬಾವಿಯೊಳಗೆ ಇಳಿ ಬಿಟ್ಟ ವೇಳೆ ಒಂದು ಹಾವು ಬಾಲಕನ ಪಕ್ಕ ಇರುವುದು ಕಂಡು ಬಂದು ಆತಂಕಕ್ಕೆ ಕಾರಣವಾಗಿತ್ತು.
ಅಭಯ್ ಪಚೌರಿ ಎಂಬ ಈ ಬಾಲಕನನ್ನು ರಕ್ಷಿಸಲು ಗಡಿ ಭದ್ರತಾ ಪಡೆ ಯೋಧರೂ ಸೇರಿದಂತೆ ಜಿಲ್ಲಾಡಳಿತದಿಂದ ಕಾರ್ಯಾಚರಣೆ ನಡೆಸಲಾಗಿತ್ತು. ಬೋರ್ ವೆಲ್ ಪಕ್ಕದಲ್ಲೇ ಮತ್ತೊಂದು ಗುಂಡಿ ತೆಗೆದು ಅದರ ಮೂಲಕ ಬಾಲಕನನ್ನು ಸಮೀಪಿಸಲಾಗಿತ್ತು. ಆತನನ್ನು ಹೊರ ತೆಗೆದು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಬಾಲಕ ಅಷ್ಟರಲ್ಲಾಗಲೇ ಸಾವನ್ನಪ್ಪಿದ್ದು, ವೈದ್ಯರು ಇದನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಬಾಲಕ ಬದುಕಿ ಬರಲೆಂದು ಹಲವಾರು ಮಂದಿ ಪ್ರಾರ್ಥಿಸಿದ್ದರಾದರೂ ಅದು ಫಲ ನೀಡಲಿಲ್ಲ.