ರಾಮನಗರ: ಇತ್ತೀಚೆಗೆ ಆನೆ ದಾಳಿ ಪ್ರಕರಣ ಹೆಚ್ಚಾಗಿದ್ದು, ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ನೀರು, ಆಹಾರ ಅರಸುತ್ತಾ ನಾಡಿನತ್ತ ಬರುವ ಕಾಡು ಪ್ರಾಣಿಗಳು, ಅನಾಹುತಕ್ಕೆ ಕಾರಣವಾಗುತ್ತಿವೆ. ಅಂತಹ ಘಟನೆಯ ವರದಿ ಇಲ್ಲಿದೆ ನೋಡಿ.
ಆನೆ ದಾಳಿಯಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಬನ್ನಹಳ್ಳಿ ಗ್ರಾಮದಲ್ಲಿ ನಡೆದಿದೆ. 68 ವರ್ಷದ ಚಿನ್ನಗಿರಿ ಗೌಡ ಮೃತಪಟ್ಟವರು. ಗ್ರಾಮದ ಹೊರ ವಲಯದಲ್ಲಿ ಬಹಿರ್ದೆಸೆಗೆ ಹೋಗಿದ್ದ ಸಂದರ್ಭದಲ್ಲಿ ದಾಳಿ ಮಾಡಿದ ಆನೆ, ಅವರನ್ನು ಸೊಂಡಿಲಿನಿಂದ ಬಡಿದು ಸಾಯಿಸಿದೆ. ಬನ್ನೇರುಘಟ್ಟ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಗಳ್ಳಾಪುರ ಅರಣ್ಯ ಪ್ರದೇಶದಿಂದ ಈ ಕಾಡಾನೆ ಬಂದಿರಬಹುದೆಂದು ಹೇಳಲಾಗಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿನ್ನಗಿರಿ ಗೌಡ ಬಹಿರ್ದೆಸೆಗೆ ಹೋಗಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ.