ಥಾಣೆ: ಪ್ರೀತಿ, ಪ್ರೇಮಕ್ಕೆ ಜಾತಿ, ಅಂತಸ್ತು ಇರಲ್ಲ ಎಂಬುದು ನಿಜವಾದರೂ, ಇದೇ ಕಾರಣಕ್ಕೆ ಅನೇಕ ಲವ್ ಸ್ಟೋರಿಗಳು ದುರಂತ ಅಂತ್ಯಕಂಡಿವೆ. ಹೀಗೆ ಮೇಲ್ವರ್ಗದ ಯುವತಿ ಪ್ರೀತಿಸಿದ ದಲಿತ ಬಾಲಕನೊಬ್ಬ ದುರಂತ ಸಾವು ಕಂಡಿದ್ದಾನೆ.
ಧರಾವೆ ಗ್ರಾಮದ ಸ್ವಪ್ನಿಲ್ ಸೋನಾವನೆ ಎಂಬ 16 ವರ್ಷದ ಬಾಲಕ ತನ್ನದೇ ಶಾಲೆಯಲ್ಲಿ ಓದುತ್ತಿದ್ದ 17 ವರ್ಷದ ಮೇಲ್ಜಾತಿ ಹುಡುಗಿಯನ್ನು ಪ್ರೀತಿಸಿದ್ದು, ಇದು ಹುಡುಗಿಯ ಮನೆಯವರಿಗೆ ಗೊತ್ತಾಗಿ ಆತನನ್ನು ಕೊಲೆ ಮಾಡಿದ್ದಾರೆ. ಬಾಲಕನ ಪೋಷಕರು ದೂರು ನೀಡಿದ್ದರೂ, ಸ್ಥಳೀಯ ಠಾಣೆ ಪೊಲೀಸರು ಕ್ರಮ ಕೈಗೊಂಡಿರಲಿಲ್ಲ. ಬಳಿಕ ರಾಜಕೀಯ ಪಕ್ಷವೊಂದರ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಅದಾದ ನಂತರ ತನಿಖೆ ನಡೆಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಹಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನಿರ್ಲಕ್ಷ್ಯ ವಹಿಸಿದ ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಬಾಲಕನನ್ನು ಕೊಲೆ ಮಾಡಿದ್ದ, ಹುಡುಗಿಯ ಇಬ್ಬರು ಸಹೋದರರು ಹಾಗೂ ಅವರ ಸಹಚರರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸಲಾಗಿದೆ ಎಂದು ಹೇಳಲಾಗಿದೆ.