ಬೆಂಗಳೂರು: ಜಾತಿ ಪ್ರಮಾಣ ಪತ್ರ, ಬೆಳೆ ದೃಢೀಕರಣ, ಜಮೀನಿನ ಪಹಣಿ ಮೊದಲಾದವುಗಳನ್ನು ಪಡೆದುಕೊಳ್ಳಲು ಇನ್ನುಮುಂದೆ ನೀವು ಕಚೇರಿಗಳಿಗೆ ಅಲೆಯಬೇಕಿಲ್ಲ. ಗ್ರಾಮ ಪಂಚಾಯಿತಿಯಲ್ಲೇ 100 ಸೇವೆಗಳು ನಿಮಗೆ ಸಿಗಲಿವೆ.
ಮಾಸಾಶನ, ವಿದ್ಯುತ್ ಬಿಲ್ ಪಾವತಿ ಮೊದಲಾದವು ಸೇರಿದಂತೆ 100 ಸೇವೆಗಳು ‘ಪಂಚಾಯಿತಿ 100 ಬಾಪೂಜಿ ಸೇವಾ ಕೇಂದ್ರ’ದಲ್ಲಿ ಆಗಸ್ಟ್ 15ರಿಂದ ಸಿಗಲಿವೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಹೆಚ್.ಕೆ.ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ್ದು, ಒಂದೇ ಸೂರಿನಲ್ಲಿ 100 ಸೇವೆಗಳು ಸಿಗಲಿವೆ. ತಾಲ್ಲೂಕು ಕೇಂದ್ರಕ್ಕೆ ಅಲೆದಾಟ ತಪ್ಪಿಸಲು ಪಂಚಾಯಿತಿಯಲ್ಲೇ ಗ್ರಾಮೀಣ ಜನರಿಗೆ ಅವಶ್ಯಕವಾಗಿ ಬೇಕಾದ ಸೇವೆಗಳನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.
ಬೆಂಗಳೂರು ಒನ್ ಮಾದರಿಯ ಈ ಸೇವಾ ಕೇಂದ್ರಗಳಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯ ಪಡೆಯಲು ಅರ್ಜಿ, ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಅರ್ಜಿ, ಜಾತಿ ಮೊದಲಾದ ಪ್ರಮಾಣ ಪತ್ರ, ವಿಮೆ ಕಂತು ಪಾವತಿ ಮಾಡಬಹುದು. ಒಟ್ಟು 100 ಸೇವೆಗಳು ರಾಜ್ಯದ 4000 ಗ್ರಾಮ ಪಂಚಾಯಿತಿಯ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಇನ್ನುಮುಂದೆ ಸಿಗಲಿವೆ ಎಂದು ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ.