ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ಕಬಾಲಿ’ ಬೆಳಗಿನ ಜಾವ 3 ಗಂಟೆಯಿಂದಲೇ ಪ್ರದರ್ಶನ ಕಾಣುತ್ತಿದ್ದು, ಎಲ್ಲಾ ಕಡೆಗಳಲ್ಲಿ ಅಭಿಮಾನಿಗಳು ಮುಗಿ ಬಿದ್ದು, ಸಿನಿಮಾ ವೀಕ್ಷಿಸಿದ್ದಾರೆ. ಆದರೆ, ಕೆಲವು ಕಡೆಗಳಲ್ಲಿ ಅಭಿಮಾನಿಗಳಿಗೆ ನಿರಾಸೆಯಾಗಿದೆ.
ಏರ್ ಏಷ್ಯಾ ವಿಶೇಷ ವಿಮಾನದಲ್ಲಿ ಬೆಂಗಳೂರಿನಿಂದ ಚೆನ್ನೈಗೆ ತೆರಳಿದ್ದ 180 ರಜನಿಕಾಂತ್ ಅಭಿಮಾನಿಗಳು ನಿರಾಸೆ ಅನುಭವಿಸಿದ್ದಾರೆ. ತಲಾ 7860 ರೂಪಾಯಿ ಪಡೆದ ಏರ್ ಏಷ್ಯಾ, ವಿಶೇಷವಾಗಿ ಡಿಸೈನ್ ಮಾಡಿದ್ದ ವಿಮಾನದಲ್ಲಿ ಬೆಂಗಳೂರಿನಿಂದ ಚೆನ್ನೈಗೆ ಕರೆದೊಯ್ದು, ಚೆನ್ನೈನ ಸತ್ಯಂ ಥಿಯೇಟರ್ ನಲ್ಲಿ ಚಿತ್ರ ತೋರಿಸುವುದಾಗಿ ಹೇಳಿತ್ತು. ಆದರೆ, ಚೆನ್ನೈಗೆ ಕರೆದೊಯ್ದು, ಪ್ರಸಾದ್ ಸ್ಟುಡಿಯೋದಲ್ಲಿ ಸಿನಿಮಾ ನೋಡುವಂತೆ ತಿಳಿಸಿದೆ. ಇದಕ್ಕೆ ಒಪ್ಪದ ಅಭಿಮಾನಿಗಳು ಏರ್ ಏಷ್ಯಾ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ತಮಗೆ ಸತ್ಯಂ ಥಿಯೇಟರ್ ನಲ್ಲಿ ಸಿನಿಮಾ ತೋರಿಸಿ, ಇಲ್ಲವಾದರೆ, ಹಣ ವಾಪಸ್ ಕೊಡಿ ಎಂದು ರಜನಿಕಾಂತ್ ಅಭಿಮಾನಿಗಳು ಏರ್ ಏಷ್ಯಾ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದಲ್ಲದೇ, ಬೆಂಗಳೂರಿನ ಕೆಲವು ಚಿತ್ರಮಂದಿರಗಳಲ್ಲಿ ಟಿಕೆಟ್ ಗಾಗಿ ನೂಕುನುಗ್ಗಲು ಉಂಟಾಗಿದ್ದು, ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಬೆಂಗಳೂರು, ಹೈದರಾಬಾದ್, ಚೆನ್ನೈ, ಮೈಸೂರು ಸೇರಿದಂತೆ ಅನೇಕ ಕಡೆಗಳಲ್ಲಿ ಬೆಳಗಿನ ಜಾವದಿಂದಲೇ ಶೋ ಆರಂಭವಾಗಿದ್ದು, ಚಿತ್ರ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಎಲ್ಲೆಡೆ ‘ನೆರುಪ್ಪುಡಾ’ ಸಾಂಗ್, ಕಬಾಲಿ ಡಾ ಡೈಲಾಗ್ ಕೇಳಿಬರುತ್ತಿದೆ.