ಹಿರಿಯ ಬಾಲಿವುಡ್ ನಟರೊಬ್ಬರು ಸುಮಾರು 14 ಕೆ.ಜಿ. ತೂಕ ಇಳಿಸಿಕೊಂಡು ಸ್ಲಿಮ್ ಆಗಿದ್ದಾರೆ. ತಾವು ತೂಕ ಇಳಿಸಿಕೊಳ್ಳಲು ಸ್ಪೂರ್ತಿಯಾದ ಮೂವರು ಬಾಲಿವುಡ್ ನಾಯಕ ನಟರೂ ಸೇರಿದಂತೆ ನಾಲ್ವರಿಗೆ ಅವರು ಧನ್ಯವಾದ ಹೇಳಿದ್ದಾರೆ.
ಅಂದ ಹಾಗೇ ತೂಕ ಕಡಿಮೆ ಮಾಡಿಕೊಂಡವರು ಹಿರಿಯ ಬಾಲಿವುಡ್ ನಟ ಅನುಪಮ್ ಖೇರ್. ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ಅನಿಲ್ ಕಪೂರ್ ಹಾಗೂ ನ್ಯೂಟ್ರಿಶಿಯನಿಸ್ಟ್ ರುಜುತಾ ದಿವೇಕರ್ ಅವರೇ ತಮಗೆ ಇದಕ್ಕೆ ಸ್ಪೂರ್ತಿ ಎಂದು ಹೇಳಿಕೊಂಡಿರುವ ಅನುಪಮ್ ಖೇರ್, ಇದಕ್ಕಾಗಿ ಧನ್ಯವಾದವೆಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿರುವ ಅಕ್ಷಯ್ ಕುಮಾರ್, ಇದಕ್ಕೆ ಶುಲ್ಕ ನೀಡಬೇಕಾಗುತ್ತದೆಂದು ತಮಾಷೆ ಮಾಡಿದ್ದಾರಲ್ಲದೇ ನಿಮ್ಮ ಸ್ವಪ್ರಯತ್ನದಿಂದಲೇ ಇದು ಸಾಧ್ಯವಾಗಿದೆ ಎಂದು ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಸದ್ಯ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಅನುಪಮ್ ಖೇರ್, 2015 ರಲ್ಲಿ ಸಲ್ಮಾನ್ ಖಾನ್ ರ ‘ಪ್ರೇಮ್ ರತನ್ ಧನ್ ಪಾಯೋ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.