ಅಮರನಾಥದ ಹಿಮಲಿಂಗ ದರ್ಶನಕ್ಕಾಗಿ ತೆರಳುವಾಗ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ರಾಜಸ್ಥಾನದ ನಿವಾಸಿ 65 ವರ್ಷದ ಸುರೀಂದರ್ ದತ್ ಬಿಯಾಸ್ ಎಂಬುವರು ಅನಂತನಾಗ್ ಜಿಲ್ಲೆಯ ಶೇಷನಾಗ್ ಎಂಬಲ್ಲಿ ಯಾತ್ರಾರ್ಥಿಗಳೊಂದಿಗೆ ತೆರಳುವಾಗ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ.
ಶುಕ್ರವಾರ ಒಂದೇ ದಿನ 15,593 ಯಾತ್ರಾರ್ಥಿಗಳು ಹಿಮಲಿಂಗದ ದರ್ಶನ ಪಡೆದಿದ್ದು, ರಾಜಸ್ಥಾನದ ಮೂಲದ ಈ ವ್ಯಕ್ತಿ ಸೇರಿದಂತೆ ಈ ಬಾರಿ ಇದುವರೆಗೆ 6 ಜನ ಮೃತಪಟ್ಟಿದ್ದಾರೆನ್ನಲಾಗಿದೆ. 6 ನೇ ದಿನವಾದ ಶುಕ್ರವಾರದವರೆಗೆ ಒಟ್ಟು 86 ಸಾವಿರ ಯಾತ್ರಾರ್ಥಿಗಳು ಹಿಮಲಿಂಗದ ದರ್ಶನ ಪಡೆದಿದ್ದಾರೆ. ಅನೇಕ ಯಾತ್ರಾರ್ಥಿಗಳು ದರ್ಶನ ಮಾಡಿ ಯಾತ್ರೆಯಿಂದ ಹಿಂತಿರುಗುತ್ತಿದ್ದು, ಶ್ರೀ ಅಮರನಾಥ ದೇಗುಲ ಮಂಡಳಿ ಹಾಗೂ ಜಮ್ಮು- ಕಾಶ್ಮೀರ ಸರ್ಕಾರದ ವಿವಿಧ ಇಲಾಖೆಗಳು ದರ್ಶನಕ್ಕೆ ಮಾಡಿರುವ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.