26 ವರ್ಷದ ಮಹಿಳೆಯೊಬ್ಬಳು ತನ್ನ 8 ವರ್ಷದ ಮಲಮಗನ ಕತ್ತು ಹಿಸುಕಿ ಕೊಲೆ ಮಾಡಿದ್ದು, ಅನಾರೋಗ್ಯದ ಕಾರಣಕ್ಕಾಗಿ ಆತ ಮೃತಪಟ್ಟಿದ್ದಾನೆಂದು ಅಕ್ಕಪಕ್ಕದವರ ಬಳಿ ಹೇಳಿದ್ದರೂ ಮರಣೋತ್ತರ ಪರೀಕ್ಷೆ ವೇಳೆ ಅಸಲಿ ಸಂಗತಿ ಬಯಲಾಗಿದೆ.
ದೆಹಲಿ ಹೊರ ವಲಯದ ವಿಜಯ್ ವಿಹಾರ್ ನಲ್ಲಿ ಈ ಘಟನೆ ನಡೆದಿದ್ದು, ಬಿಹಾರ ಮೂಲದ ಇಂದಲ್ ಪಾಸ್ವಾನ್ ಎಂಬಾತನ ಜೊತೆ ವಿವಾಹವಾಗಿದ್ದ ಕಾಜೋಲ್, ಈ ಅಮಾನುಷ ಕೃತ್ಯವೆಸಗಿದ್ದಾಳೆ. ಇಂದಲ್ ಪಾಸ್ವಾನ್ ಈ ಮೊದಲು ವಿವಾಹವಾಗಿದ್ದು, ಅವರಿಗೆ ಪ್ರಿನ್ಸ್ ಎಂಬ ಮಗನಿದ್ದ. ಐದು ವರ್ಷಗಳ ಹಿಂದೆ ಮೊದಲ ಪತ್ನಿ ಮೃತಪಟ್ಟ ಬಳಿಕ ಕಾಜೋಳ್ ಳನ್ನು ಎರಡನೇ ವಿವಾಹವಾಗಿದ್ದು, ಆಕೆಗೂ ಒಬ್ಬ ಮಗ ಜನಿಸಿದ್ದಾನೆ.
ಮೊದಲ ಪತ್ನಿಯ ಮಗ ಪ್ರಿನ್ಸ್ ಇರುವ ವಿಚಾರ ಮುಚ್ಚಿಟ್ಟು ತನ್ನನ್ನು ಪತಿ ವಿವಾಹವಾಗಿದ್ದನೆಂದು ಆಕ್ರೋಶಗೊಂಡಿದ್ದ ಕಾಜೋಲ್, ಪ್ರಿನ್ಸ್ ಗೆ ಸದಾ ಕಿರುಕುಳ ನೀಡುತ್ತಿದ್ದಳೆನ್ನಲಾಗಿದೆ. ಆಗ ಕೆಲವರು ಮುಂದೆ ಆತ ದೊಡ್ಡವನಾದ ಮೇಲೆ ಸೇಡು ತೀರಿಸಿಕೊಳ್ಳಬಹುದೆಂದು ಹೇಳಿದ್ದು, ಇದು ಕಾಜೋಲ್ ಳಿಗೆ ಭೀತಿಯನ್ನುಂಟು ಮಾಡಿದೆ.
ಹೀಗಾಗಿ ಮಲಮಗನ ಕತ್ತು ಹಿಸುಕಿ ಹತ್ಯೆ ಮಾಡಿದ ಕಾಜೋಲ್, ಬಳಿಕ ಅಕ್ಕಪಕ್ಕದವರ ನೆರವಿನಿಂದ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ಮಗ ಅನಾರೋಗ್ಯಕ್ಕೊಳಗಾಗಿದ್ದನೆಂದು ಸುಳ್ಳು ಹೇಳಿದ್ದಾಳೆ. ಆದರೆ ಆಕೆಯ ಹೇಳಿಕೆಯಿಂದ ಅನುಮಾನಗೊಂಡ ವೈದ್ಯರು, ಪೊಲೀಸರಿಗೆ ಸುದ್ದಿ ಮುಟ್ಟಿಸಿ ಶವದ ಮರಣೋತ್ತರ ಪರೀಕ್ಷೆ ನಡೆಸಿದ್ದು, ಕತ್ತು ಹಿಸುಕಿ ಕೊಲೆ ಮಾಡಿರುವುದು ಬಯಲಾಗಿದೆ. ಪೊಲೀಸ್ ವಿಚಾರಣೆ ವೇಳೆ ಕಾಜೋಲ್ ತನ್ನ ತಪ್ಪೊಪ್ಪಿಕೊಂಡಿದ್ದಾಳೆಂದು ಹೇಳಲಾಗಿದ್ದು, ಆಕೆಯನ್ನೀಗ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.