ಕಾರೊಂದರಲ್ಲಿ ದಾಖಲೆಗಳಿಲ್ಲದ 58 ಲಕ್ಷ ರೂ. ಹಣವನ್ನು ಸಾಗಿಸುತ್ತಿರುವುದು ಕಂಡು ಬಂದಿದೆ. ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿಯ ಟೋಲ್ ನಾಕಾದಲ್ಲಿ ತಪಾಸಣೆ ವೇಳೆ ಈ ಹಣ ಪತ್ತೆಯಾಗಿದೆ.
ನೋಂದಣಿಯಾಗದ ಹೊಸ ಡಸ್ಟರ್ ಕಾರನ್ನು ಟೋಲ್ ಬಳಿ ಇನ್ಸ್ ಪೆಕ್ಟರ್ ಜಿ. ರಘು ತಪಾಸಣೆಗೊಳಪಡಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ರಾಜಸ್ಥಾನ ಮೂಲದ ಚಿನ್ನಾಭರಣಗಳ ವ್ಯಾಪಾರಿ ಭಗವಾನ್ ಶಾಂಖಲಾ ಗೋಪಾಲ ರಾಮಜಿ, 58 ಲಕ್ಷ ರೂ. ನಗದನ್ನು ದಾವಣಗೆರೆಯಿಂದ ರಾಜಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾರಲ್ಲದೇ ಸ್ವಲ್ಪ ಹಣವನ್ನು ಸಂಬಂಧಿಕರ ಆಸ್ಪತ್ರೆ ಖರ್ಚಿಗೆ ನೀಡಿ, ಉಳಿದ ಹಣವನ್ನು ಜಮೀನು ಖರೀದಿಗೆ ಬಳಸಲು ಮುಂದಾಗಿದ್ದಾಗಿ ತಿಳಿಸಿದ್ದಾರೆ.
ವಿಷಯ ತಿಳಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಣದ ಮೂಲದ ಕುರಿತು ವಿಚಾರಣೆ ನಡೆಸಿದ್ದಾರೆಂದು ತಿಳಿದುಬಂದಿದ್ದು, ಅಕ್ರಮ ಹಣ ಸಾಗಾಟಕ್ಕೆ ಸಂಬಂಧಿಸಿದಂತೆ ಹಿರೇಬಾಗೇವಾಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾವಣಗೆರೆಯಲ್ಲಿ ಜ್ಯುವೆಲರ್ಸ್ ಅಂಗಡಿ ಹೊಂದಿರುವ ಭಗವಾನ್ ಶಾಂಖಲಾ ಗೋಪಾಲ ರಾಮಜಿಯನ್ನು ಬಂಧಿಸಲಾಗಿದೆ.