ಈಕೆಯ ಎರಡೂ ಕಿಡ್ನಿಗಳು ಫೇಲ್ ಆಗಿವೆ. ಕಿಡ್ನಿ ಫೇಲ್ ಆದರೇನು ನಾನು ಕೈಗಳಿಂದ ಎಲ್ಲರಿಗೂ ಟೀ ಮಾಡಿಕೊಡುತ್ತೀನಿ ಎನ್ನುತ್ತಾಳೆ 67 ವರ್ಷದ ಶರ್ಮಿಷ್ಠಾ.
ಅಹಮದಾಬಾದಿನ ಸರಸಪುರ ನಿವಾಸಿ ಶರ್ಮಿಷ್ಠಾ, 2002 ರಿಂದಲೇ ‘ಚಾಯ್ ಪೆ ಚಾರಿಟಿ’ ಸೇವೆಯನ್ನು ಆರಂಭಿಸಿದ್ದಾಳೆ. ಈಕೆ ಅಹಮದಾಬಾದಿನಲ್ಲಿ ನಡೆಯುವ ಜಗನ್ನಾಥ ರಥೋತ್ಸವಕ್ಕೆ ಬರುವ ಭಕ್ತಾದಿಗಳಿಗೆ ಟೀ ಸೇವೆ ಮಾಡುತ್ತಿದ್ದಾಳೆ.
ಶರ್ಮಿಷ್ಠಾಳ ಗಂಡ ತೀರಿಕೊಂಡಿದ್ದಾನೆ. ಹಾಗಾಗಿ ಆಕೆಗೆ ಪ್ರತಿ ತಿಂಗಳು ವಿಧವಾ ಪಿಂಚಣಿಯ 5000 ರೂಪಾಯಿ ಸಿಗುತ್ತದೆ. ತನ್ನ ಆರೋಗ್ಯ ಹದಗೆಟ್ಟಿದೆ ಎಂಬುದನ್ನೂ ಲೆಕ್ಕಿಸದ ಈಕೆ, ಕಳೆದ 14 ವರ್ಷದಿಂದ ಭಕ್ತಾದಿಗಳ ಸೇವೆಯಲ್ಲಿ ತೊಡಗಿದ್ದಾಳೆ. ಈಶ್ವರನ ಭಕ್ತೆಯಾಗಿರುವ ಈಕೆ, ತಾನು ಇಂದು ಜೀವಂತವಾಗಿರಲು ಆ ಜಗನ್ನಾಥನೇ ಕಾರಣ. ಇಲ್ಲವಾದರೆ ಎರಡೂ ಕಿಡ್ನಿಯನ್ನು ಕಳೆದುಕೊಂಡಿರುವ ತಾನು ಬದುಕುವುದಾದರೂ ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಾಳೆ.
‘ಚಾಯ್ ಪೆ ಚಾರಿಟಿ’ ಆರಂಭವಾದಾಗ ಕೇವಲ 500 ಜನರು ಇದರಲ್ಲಿ ಭಾಗಿಯಾಗಿದ್ದರಂತೆ, ಈಗ ಅದು 1.20 ಲಕ್ಷಕ್ಕೆ ಏರಿದೆ. ಬಹುಶಃ ಶರ್ಮಿಷ್ಠಾಳ ಈ ನಂಬಿಕೆ ಹಾಗೂ ಸೇವೆಯೇ ಅವಳನ್ನು ಇಂದಿಗೂ ಜೀವಂತ ಇರಿಸಿದೆ.