ನವ ವಿವಾಹಿತೆಯೊಬ್ಬಳು ವಿವಾಹವಾದ ಎರಡು ತಿಂಗಳಲ್ಲೇ ತನ್ನ ಪತಿಯನ್ನು ತೊರೆದಿದ್ದಾಳೆ. ಅಷ್ಟೇ ಅಲ್ಲ ತನ್ನ ಈ ದಿಟ್ಟ ನಿರ್ಧಾರವನ್ನು ಪಂಚಾಯಿತಿ ಮುಖಂಡರ ಮುಂದೆಯೇ ರಾಜಾರೋಷವಾಗಿ ಘೋಷಿಸಿದ್ದಾಳೆ. ಆಕೆಯ ಈ ನಿರ್ಧಾರಕ್ಕೆ ಕಾರಣವಾದ ವಿಚಾರ ಕೇಳಿದ್ರೆ ನೀವೂ ಆಕೆಯನ್ನು ಶ್ಲಾಘಿಸುತ್ತೀರಿ.
ಯಸ್, ಆಕೆ ಕೈಗೊಂಡ ನಿರ್ಧಾರ ಅಂತ ಮಹತ್ವದ್ದಾಗಿದೆ. ದೇಶಾದ್ಯಂತ ಸ್ವಚ್ಚ ಭಾರತ್ ಆಂದೋಲನದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೇ ಬಯಲು ಮುಕ್ತ ಶೌಚಾಲಯ ನಿರ್ಮಾಣಕ್ಕಾಗಿ ಪಣ ತೊಡಲಾಗಿದೆ. ಆದರೆ ಈಕೆಯ ಮನೆಯಲ್ಲಿ ಶೌಚಾಲಯವಿಲ್ಲದಿರುವುದೇ ವಿಚ್ಚೇದನಕ್ಕೆ ಕಾರಣವಾಗಿದೆ.
ಬಿಹಾರದ ಪಶ್ಚಿಮ ಚಂಪಾರಣ್ಯದ ಅರ್ಚನಾಳ ವಿವಾಹ ಬಬ್ಲು ಕುಮಾರ್ ನೊಂದಿಗೆ ಮೇ ತಿಂಗಳಿನಲ್ಲಿ ನೆರವೇರಿತ್ತು. ಪತಿ ಮನೆಗೆ ಬಂದ ಅರ್ಚನಾಳಿಗೆ ಶೌಚಾಲಯವಿಲ್ಲದಿರುವುದು ತ್ರಾಸದಾಯಕವಾಗಿತ್ತು. ಸೂರ್ಯ ಹುಟ್ಟುವ ಮುನ್ನ ಶೌಚಾಲಯಕ್ಕೆ ಬಯಲಿಗೆ ಹೋಗಬೇಕಾಗಿದ್ದ ಅರ್ಚನಾ, ಮನೆಯಲ್ಲಿಯೇ ಶೌಚಾಲಯ ನಿರ್ಮಿಸಲು ಪತಿ ಬಬ್ಲು ಕುಮಾರನಿಗೆ ಮನವಿ ಮಾಡಿದ್ದಾಳೆ. ಅದಕ್ಕಾತ ನಿಮ್ಮಪ್ಪನ ಮನೆಯಿಂದ ಹಣ ತಾ ಎಂದು ಧಿಮಾಕಿನ ಮಾತುಗಳನ್ನಾಡಿದ್ದಾನೆ. ಆತನಿಗೆ ಹೇಳಿ ಹೇಳಿ ಸಾಕಾದ ಅರ್ಚನಾ, ಅಂತಿಮವಾಗಿ ಆತನನ್ನು ತೊರೆಯಲು ನಿರ್ಧರಿಸಿದ್ದಾಳೆ. ಅಷ್ಟೇ ಅಲ್ಲ ತನ್ನ ಈ ನಿರ್ಧಾರವನ್ನು ಪಂಚಾಯಿತಿ ಮುಖಂಡರ ಸಮ್ಮುಖದಲ್ಲಿ ಘಂಟಾಘೋಷವಾಗಿ ಹೇಳುವ ಮೂಲಕ ಸಂಬಂಧ ಕಡೆದುಕೊಂಡಿದ್ದಾಳೆ. ಆಕೆಯ ಈ ದಿಟ್ಟ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.