ಚೆನ್ನೈ: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡರೂ, ನೋವಿನಲ್ಲಿಯೇ ಬಸ್ ನಲ್ಲಿದ್ದ ಪ್ರಯಾಣಿಕರನ್ನು ಪಾರು ಮಾಡಿ, ಬಸ್ ಚಾಲಕನೊಬ್ಬ ಕರ್ತವ್ಯನಿಷ್ಠೆ ಮೆರೆದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡು ಸಾರಿಗೆ ನಿಗಮದ ಬಸ್ ಚಾಲಕ ಹೀಗೆ ಕರ್ತವ್ಯ ನಿಷ್ಠೆ ಮೆರೆದವರು.
ತಂಜಾವೂರಿನಿಂದ ಚೆನ್ನೈಗೆ ಹೊರಟಿದ್ದ ತಮಿಳುನಾಡು ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ಎಕ್ಸ್ ಪ್ರೆಸ್ ಬಸ್, ವಿಲ್ಲುಪುರಂ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೆ ಈಡಾಗಿದೆ. ತಿರುವಿನಲ್ಲಿ ಅತಿ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದಿದ್ದು, ಅದರಲ್ಲಿದ್ದ ಕಬ್ಬಿಣದ ರಾಡ್ ಗಳು ಬಸ್ ಒಳಗೆ ತೂರಿ ಬಂದು ಗಾಜುಗಳೆಲ್ಲಾ ಪುಡಿಯಾಗಿವೆ. ಚಾಲಕನ ತಲೆಗೆ ರಾಡುಗಳು ಬಡಿದು, ತೀವ್ರ ರಕ್ತಸ್ರಾವವಾಗಿದ್ದು, ಬಸ್ ನಿಯಂತ್ರಣ ಕಳೆದುಕೊಂಡಿದ್ದು, ಅಡ್ಡಾದಿಡ್ಡಿ ಚಲಿಸಿದೆ.
ತಕ್ಷಣ ಚಾಲಕ ಬಸ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ರಾಷ್ಟ್ರೀಯ ಹೆದ್ದಾರಿ ಪಕ್ಕಕ್ಕೆ ಒಯ್ದು ನಿಲ್ಲಿಸಿದ್ದಾನೆ. ಬಸ್ ನಲ್ಲಿದ್ದ ಪ್ರಯಾಣಿಕರು, ಚಾಲಕನನ್ನು ನೋಡಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಅಸಾಧ್ಯ ನೋವಿನಲ್ಲೂ ಪ್ರಯಾಣಿಕರನ್ನು ಪಾರು ಮಾಡಿದ್ದಾನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.