ವಿಚ್ಛೇದನ ಪ್ರಕರಣಗಳು ದಿನದಿಂದ ದಿನಕ್ಕೆ ಜಾಸ್ತಿಯಾಗ್ತಾ ಇವೆ. ಈ ನಡುವೆಯೇ ಮಧ್ಯಪ್ರದೇಶ ಕೋರ್ಟ್ ದಂಪತಿಯನ್ನು ವಿಭಿನ್ನ ರೀತಿಯಲ್ಲಿ ಒಂದು ಮಾಡಿದೆ. ನ್ಯಾಯಾಧೀಶರ ಮುಂದೆಯೇ ಪತ್ನಿಗೆ ಸೀರೆ ನೀಡಿದ ಪತಿ, ನೀನು ಮೊದಲೇ ಸುಂದರವಾಗಿದ್ದೀಯಾ, ಸೀರೆಯಲ್ಲಿ ಮತ್ತಷ್ಟು ಸುಂದರವಾಗಿ ಕಾಣ್ತೀಯಾ ಎಂದಿದ್ದಾನೆ. ಇದೊಂದೇ ಮಾತು ಮೂರು ವರ್ಷಗಳಿಂದ ದೂರವಾಗಿದ್ದ ದಂಪತಿ ಮತ್ತೆ ಒಂದಾಗುವಂತೆ ಮಾಡಿದೆ.
ಜೈತಾಪುರ ನಿವಾಸಿ ಸಂಜು ಮದುವೆ ಅದೇ ನಗರದ ರಾನು ಜೊತೆ ನಡೆದಿತ್ತು. ಮದುವೆಯಾಗಿ 5 ತಿಂಗಳು ಮಾತ್ರ ಗಂಡನ ಮನೆಯಲ್ಲಿದ್ದ ರಾನು, ತಂದೆ ಮನೆಗೆ ಹೋಗಿದ್ದಳು. ಮೂರು ವರ್ಷಗಳ ನಂತ್ರ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಅನೇಕ ವಾದವಿವಾದಗಳ ನಂತ್ರ ಪ್ರಕರಣವನ್ನು ಸಿಜೆಎಂ ಕೋರ್ಟ್ ಗೆ ವರ್ಗಾಯಿಸಲಾಯ್ತು.
ಮದುವೆ ನಂತ್ರ ನನಗಾಗಿ ಪತಿ ಸಮಯ ಕೊಡ್ತಿರಲಿಲ್ಲ. ನನ್ನ ಸೌಂದರ್ಯವನ್ನು ಯಾವಾಗಲೂ ಕಡೆಗಣಿಸುತ್ತಿದ್ದ. ಎಂದೂ ಉಡುಗೊರೆ ನೀಡಿಲ್ಲ. ಇದರಿಂದ ನೊಂದು ಅಪ್ಪನ ಮನೆಗೆ ಹೋದೆ ಎಂದಿದ್ದಾಳೆ ರಾನು. ರಾನು ನೋವು ಆಲಿಸಿದ ಕೋರ್ಟ್ ಸಂಜುಗೆ ಒಂದು ಸೀರೆ ತರುವಂತೆ ಸೂಚಿಸಿದೆ. ಸಂಜು ತಂದ ಸೀರೆ ರಾನುಗೆ ಹಿಡಿಸಲಿಲ್ಲ. ನಂತ್ರ ಸಂಜು ಜೊತೆ ರಾನು ಕೂಡ ಅಂಗಡಿಗೆ ಹೋಗಿ ಸೀರೆ ಆಯ್ಕೆ ಮಾಡಿದ್ದಾಳೆ. ನ್ಯಾಯಾಧೀಶರ ಮುಂದೆಯೇ ಸಂಜು, ರಾನುಗೆ ಸೀರೆ ನೀಡಿದ್ದಾನೆ. ಜೊತೆಗೆ ನೀನು ಸುಂದರವಾಗಿಯೇ ಇದ್ದೀಯಾ, ಈ ಸೀರೆಯಲ್ಲಿ ಮತ್ತಷ್ಟು ಸುಂದರವಾಗಿ ಕಾಣ್ತೀಯಾ ಎಂದಿದ್ದಾನೆ.