ಮಾನಸಿಕ ಅಸ್ವಸ್ಥಳಾಗಿದ್ದ ಮಹಿಳೆಯೊಬ್ಬಳು ತನ್ನ ಮಗ ಮನೆಯಲ್ಲಿಯೇ ಮೃತಪಟ್ಟು ನಾಲ್ಕು ದಿನಗಳಾಗಿದ್ದರೂ ಅದರ ಅರಿವಿಲ್ಲದೆ ಶವದ ಜೊತೆಯಲ್ಲಿ ವಾಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ನವದೆಹಲಿಯ ಕಾಲಿ ಬರಿ ಏರಿಯಾದಲ್ಲಿ ರಾಮ್ದುಲಾರಿ ಎಂಬ 54 ವರ್ಷದ ಮಾನಸಿಕ ಅಸ್ವಸ್ಥ ಮಹಿಳೆ ತನ್ನ ಪುತ್ರ ಕಪಿಲ್ ಜೊತೆ ವಾಸವಾಗಿದ್ದಳು. ಈಕೆಯ ಮೂವರು ಪುತ್ರಿಯರಿಗೆ ವಿವಾಹ ಮಾಡಿಕೊಡಲಾಗಿದ್ದು, ದೆಹಲಿಯ ವಿವಿಧ ಪ್ರಾಂತ್ಯಗಳಲ್ಲಿ ವಾಸವಾಗಿದ್ದಾರೆ.
ಕಪಿಲ್ ತನಗೆ ಮತ್ತು ತನ್ನ ತಾಯಿಗೆ ಹೊರಗಿನಿಂದ ಊಟ ತರುತ್ತಿದ್ದನೆನ್ನಲಾಗಿದ್ದು, ಮದ್ಯ ವ್ಯಸನಿಯಾಗಿದ್ದ ಈತ, ಕುಡಿದ ಅಮಲಿನಲ್ಲಿ ಮನೆಯಲ್ಲಿಯೇ ಬಿದ್ದು ನಾಲ್ಕು ದಿನಗಳ ಹಿಂದೆ ಮೃತಪಟ್ಟಿದ್ದಾನೆ. ಈ ನಾಲ್ಕು ದಿನಗಳ ಕಾಲ ಆಹಾರವಿಲ್ಲದೆ ಹಸಿವಿನಿಂದ ಕಂಗೆಟ್ಟಿದ್ದ ರಾಮ್ದುಲಾರಿ, ಪಕ್ಕದ ಮನೆಯವರ ಸಹಾಯದಿಂದ ಮಗಳಿಗೆ ಫೋನ್ ಮಾಡಿಸಿದ ವೇಳೆ ಕಪಿಲ್ ಸಾವನ್ನಪ್ಪಿರುವುದು ಬಹಿರಂಗವಾಗಿದೆ. ಕೊಳೆತ ಸ್ಥಿತಿಯಲ್ಲಿದ್ದ ಶವವನ್ನು ಪೊಲೀಸರು ಈಗ ಮರಣೋತ್ತರ ಪರೀಕ್ಷೆಗೊಳಪಡಿಸಿದ್ದಾರೆ.