ಪುಟ್ಟ ನಾಯಿಯೊಂದನ್ನು ಕಟ್ಟಡದ ಮೇಲಿನಿಂದ ಕೆಳಗೆಸೆದು ವಿಕೃತ ಸಂತಸವನ್ನನುಭವಿಸಿದ್ದ ವ್ಯಕ್ತಿಗಳ ಗುರುತು ಪತ್ತೆಯಾಗಿದೆ. ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಇವರ ಕೃತ್ಯದ ವಿಡಿಯೋ ಹರಿದಾಡುತ್ತಿದ್ದು, ಇವರುಗಳ ಮಾಹಿತಿ ನೀಡಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಪ್ರಾಣಿ ದಯಾ ಸಂಘಟನೆಯೊಂದು ತಿಳಿಸಿತ್ತು.
ನಾಯಿಯನ್ನು ಕೆಳಗೆಸೆದವನು ಹಾಗೂ ಅದನ್ನು ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡವನು ಇಬ್ಬರೂ ಚೆನ್ನೈನಲ್ಲಿ ಮೆಡಿಕಲ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೆಂದು ಹೇಳಲಾಗಿದ್ದು, ತೂತಿಕಾರನ್ ಹಾಗೂ ತಿರುವನ್ವೇಲಿ ಜಿಲ್ಲೆಯವರೆಂದು ತಿಳಿದುಬಂದಿದೆ. ಚೆನ್ನೈನ ತಮ್ಮ ಕಾಲೇಜು ಬಳಿಯೇ ರೂಮ್ ಮಾಡಿಕೊಂಡಿದ್ದ ಅಶೀಶ್ ಪಾಲ್ ಹಾಗೂ ಗೌತಮ್ ಸುದರ್ಶನ್ ಇದೇ ಕಟ್ಟಡದ ಮೇಲಿನಿಂದ ನಾಯಿಯನ್ನು ಕೆಳಗೆಸೆದಿದ್ದಾರೆ.
ನಾಯಿ ಸತ್ತಿದೆಯೋ ಅಥವಾ ಗಾಯಗೊಂಡಿದೆಯೋ ಎಂಬುದರ ಕುರಿತು ಯಾವುದೇ ಮಾಹಿತಿಯಿಲ್ಲವೆನ್ನಲಾಗಿದ್ದು, ಫೇಸ್ ಬುಕ್ ನಲ್ಲಿ ಆಕ್ರೋಶ ವ್ಯಕ್ತವಾಗುತ್ತಿರುವುದು ಹಾಗೂ ತಮ್ಮಗಳ ವಿರುದ್ದ ದೂರು ದಾಖಲಾದ ಬಳಿಕ ಇಬ್ಬರೂ ತಲೆ ಮರೆಸಿಕೊಂಡಿದ್ದಾರೆನ್ನಲಾಗಿದೆ. ಮೆಡಿಕಲ್ ವ್ಯಾಸಂಗ ಮಾಡಿ ಪ್ರಾಣವನ್ನು ರಕ್ಷಿಸಬೇಕಾದವರು ಇಂತಹ ಅಮಾನವೀಯ ಕೃತ್ಯ ಮಾಡಿರುವುದಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆಯಲ್ಲದೇ ಅವರುಗಳನ್ನು ಕಾಲೇಜಿನಿಂದ ವಜಾ ಮಾಡಬೇಕೆಂದು ಆಗ್ರಹಿಸಲಾಗಿದೆ. ಇವರಿಬ್ಬರ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.