ಉದಯಪುರ್: ಕಳ್ಳತನ ಮಾಡಲು ಬಂದವರು ಯಾರಿಗೂ ಗೊತ್ತಾಗದಂತೆ ಕಳವು ಮಾಡುವುದು ಮಾಮೂಲಿ. ಆದರೆ, ಕಳ್ಳತನ ಮಾಡಲು ಬಂದ ವ್ಯಕ್ತಿಯೊಬ್ಬ ಸಂಕಷ್ಟಕ್ಕೆ ಸಿಲುಕಿ ಮನೆ ಮಾಲೀಕನ ಸಹಾಯ ಕೇಳಿದ ಘಟನೆ ವರದಿಯಾಗಿದೆ.
ರಾಜಸ್ತಾನದ ಚಮನ್ ಪುರದಲ್ಲಿರುವ ಅಪಾರ್ಟ್ ಮೆಂಟ್ ವೊಂದಕ್ಕೆ ಕಳ್ಳರ ತಂಡವೊಂದು ಕಳ್ಳತನ ಮಾಡಲು ಬಂದಿದ್ದು, ಮೊದಲಿಗೆ ಅಪಾರ್ಟ್ ಮೆಂಟ್ ಬಾಲ್ಕನಿ ಹತ್ತಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಕಳ್ಳನೊಬ್ಬ ಅರ್ಧದವರೆಗೂ ಅಪಾರ್ಟ್ ಮೆಂಟ್ ಹತ್ತಿದ್ದು, ನಂತರ ಮೇಲೆ ಹತ್ತಲಾಗದೇ, ಕೆಳಗೂ ಇಳಿಯಲಾಗದೇ ಒದ್ದಾಡಿದ್ದಾನೆ. ಸಂಕಷ್ಟಕ್ಕೆ ಸಿಲುಕಿ ಸಹಾಯಕ್ಕಾಗಿ ಅಂಗಲಾಚಿದ್ದು, ಆತನನ್ನು ಕಂಡ ಅಪಾರ್ಟ್ ಮೆಂಟ್ ಮಾಲೀಕ ಮತ್ತು ನಿವಾಸಿಗಳು ಬಚಾವ್ ಮಾಡಿದ್ದಾರೆ.
ಕಳ್ಳನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಪಾರ್ಟ್ ಮೆಂಟ್ ಸುಮಾರು 100 ಅಡಿ ಎತ್ತರ ಇದ್ದು, ಇಲ್ಲಿಗೆ ಕಳವು ಮಾಡಲು ಈ ತಂಡ ಬಂದಿತ್ತು. ಅವರಲ್ಲಿ ಕಳ್ಳನೊಬ್ಬ ಬಾಲ್ಕನಿ ಏರಲಾಗದೇ ಅರ್ಧದಲ್ಲೇ ಸಿಲುಕಿಕೊಂಡಿದ್ದು, ನೆರವಿಗೆ ಅಂಗಲಾಚಿ, ಕೊನೆಗೆ ಪೊಲೀಸರ ಅತಿಥಿಯಾಗಿದ್ದಾನೆ ಎನ್ನಲಾಗಿದೆ.