ಬೆಂಗಳೂರು: ವಿಧಾನ ಮಂಡಲ ಉಭಯ ಸದನಗಳ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳಲ್ಲಿ ಬಂಡಾಯದ ಬೇಗುದಿ ಇದೆ. ಸಂಪುಟ ಪುನಾರಚನೆ ನಂತರ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ.
ಪ್ರತಿಪಕ್ಷಗಳನ್ನು ಎದುರಿಸಲು ಆಡಳಿತ ಪಕ್ಷ ಕಾಂಗ್ರೆಸ್ ಸಜ್ಜಾಗಿದೆ. ಸರ್ಕಾರದ ಲೋಪಗಳನ್ನು ಎತ್ತಿ ಹಿಡಿಯಲು ಪ್ರತಿಪಕ್ಷಗಳು ರಣತಂತ್ರ ರೂಪಿಸಿವೆ. ಬಿ.ಜೆ.ಪಿ. ಪದಾಧಿಕಾರಿಗಳ ನೇಮಕಾತಿ ಬಗ್ಗೆ ಪಕ್ಷದ ನಾಯಕರು ಅಸಮಾಧಾನ ವ್ಯಕ್ತಪಡಿಸಿ ದೆಹಲಿವರೆಗೂ ಹೋಗಿ ದೂರು ನೀಡಿ ಬಂದಿದ್ದಾರೆ. ಜೆ.ಡಿ.ಎಸ್. ನ ಕೆಲವು ಶಾಸಕರು, ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಅಮಾನತುಗೊಂಡಿದ್ದಾರೆ. ಅದೇ ರೀತಿ ಆಡಳಿತ ಪಕ್ಷ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ವಿರುದ್ಧ ಸಚಿವ ಸ್ಥಾನ ವಂಚಿತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿಂದಿನ ಅಧಿವೇಶನಗಳಲ್ಲಿ ವಿಧಾನಸಭೆ ಅಧ್ಯಕ್ಷರಾಗಿದ್ದ ಕಾಗೋಡು ತಿಮ್ಮಪ್ಪ, ಶಾಸಕ ರಮೇಶ್ ಕುಮಾರ್ ಸರ್ಕಾರಕ್ಕೆ ಚಾಟಿ ಬೀಸುತ್ತಿದ್ದರು. ಈಗ ಇಬ್ಬರೂ ಸಚಿವರಾಗಿದ್ದಾರೆ. ಅನುಪಮಾ ಶೆಣೈ ಪ್ರಕರಣ, ಅಕ್ರಮ ಮರಳು ಗಣಿಗಾರಿಕೆ ಸೇರಿದಂತೆ ಹಲವು ವಿಷಯಗಳು ಚರ್ಚೆಗೆ ಒಳಗಾಗಲಿವೆ ಎನ್ನಲಾಗಿದೆ.