ಜೂನ್ 24 ರಂದು ಹಾಡಹಗಲೇ ಚೆನ್ನೈನ ನುಂಗಂಬಾಕಂ ರೈಲು ನಿಲ್ದಾಣದಲ್ಲಿ ಇನ್ಫೋಸಿಸ್ ಉದ್ಯೋಗಿ ಸ್ವಾತಿಯನ್ನು ಹತ್ಯೆ ಮಾಡಿದ್ದ ಆರೋಪಿ ರಾಮ್ ಕುಮಾರ್, ಕೊಲೆಗೆ ಕಾರಣವಾದ ಅಂಶಗಳನ್ನು ನ್ಯಾಯಾಧೀಶರ ಮುಂದೆ ಬಿಚ್ಚಿಟ್ಟಿದ್ದಾನೆಂದು ಹೇಳಲಾಗಿದೆ.
ಶುಕ್ರವಾರ ತಿರುವನ್ವೇಲಿಯಲ್ಲಿ ಚೆನ್ನೈ ಪೊಲೀಸರಿಂದ ಬಂಧನಕ್ಕೊಳಗಾಗುವ ವೇಳೆ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ರಾಮ್ ಕುಮಾರ್ ನನ್ನು ತಿರುವನ್ವೇಲಿಯ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಚೇತರಿಸಿಕೊಂಡ ಬಳಿಕ ನ್ಯಾಯಾಧೀಶ ಎಂ. ರಾಮದಾಸ್ ಅವರ ಮುಂದೆ ತನ್ನ ಹೇಳಿಕೆ ದಾಖಲಿಸಿದ್ದಾನೆ.
ಸ್ವಾತಿಯ ಆಕರ್ಷಣೆಗೊಳಗಾಗಿದ್ದ ತಾನು, ಮೂರು ಬಾರಿ ಆಕೆಗೆ ಪ್ರಪೋಸ್ ಮಾಡಿದ್ದೆ. ನುಂಗಂಬಾಕಂ ರೈಲು ನಿಲ್ದಾಣದಲ್ಲಿ ಪ್ರಪೋಸ್ ಮಾಡಿದ ಸಂದರ್ಭದಲ್ಲಿ ಆಕೆ ಸಾರ್ವಜನಿಕವಾಗಿಯೇ ನನ್ನ ರೂಪವನ್ನು ಹೀಯಾಳಿಸಿದ್ದಳು. ಇದರಿಂದ ಅವಮಾನಿತನಾದ ತಾನು ಆಕೆಯ ಹತ್ಯೆ ಮಾಡಿ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದೆ ಎಂದಿದ್ದಾನೆ.
ಆಕೆಯ ಪ್ರತಿ ದಿನದ ಚಲನವಲನವನ್ನು ಅರಿತಿದ್ದ ತಾನು, ನುಂಗಂಬಾಕಂ ರೈಲು ನಿಲ್ದಾಣದಲ್ಲಿ ಕುಡುಗೋಲಿನಿಂದ ಕತ್ತು ಸೀಳಿ ಹತ್ಯೆ ಮಾಡಿದ್ದಾಗಿ ರಾಮ್ ಕುಮಾರ್ ತಪ್ಪೊಪ್ಪಿಕೊಂಡಿದ್ದಾನೆಂದು ಹೇಳಲಾಗಿದೆ. ಇದೀಗ ರಾಮ್ ಕುಮಾರ್ ನನ್ನು ಅಂಬುಲೆನ್ಸ್ ನಲ್ಲಿ ಚೆನ್ನೈಗೆ ಕರೆದುಕೊಂಡು ಬಂದಿರುವ ಪೊಲೀಸರು ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗುವ ಸಾಧ್ಯತೆಗಳಿದ್ದು, ಬಳಿಕ ಆತನನ್ನು ಜೈಲಿಗೆ ಕಳುಹಿಸಲಾಗುವುದೆಂದು ತಿಳಿದುಬಂದಿದೆ.