ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆ ಅಥವಾ ಪುರುಷರ ಮೇಲೆ ಹಲ್ಲೆ ನಡೆಯುತ್ತಿರುವ ಸಂದರ್ಭಗಳಲ್ಲಿ ಬಹುತೇಕ ಮಂದಿ ಮೂಕಪ್ರೇಕ್ಷಕರಾಗಿ ಅದನ್ನು ವೀಕ್ಷಿಸುತ್ತಾರೆಯೇ ವಿನಾ ಹಲ್ಲೆಗೊಳಗಾಗುವವರ ರಕ್ಷಣೆಗೆ ಮುಂದಾಗುವುದಿಲ್ಲ. ಇಂತಹ ಸನ್ನಿವೇಶ ಬಹುತೇಕ ಸಂದರ್ಭಗಳಲ್ಲಿ ಕಂಡು ಬರುವ ಮಧ್ಯೆ ಅಪರೂಪವೆನ್ನಬಹುದಾದ ಘಟನೆಯೊಂದು ಈಜಿಪ್ಟ್ ನಲ್ಲಿ ನಡೆದಿದೆ.
ವ್ಯಕ್ತಿಯೊಬ್ಬ ಹಾಡಹಗಲೇ ನಡುರಸ್ತೆಯಲ್ಲಿ ತನ್ನ ಪತ್ನಿಯನ್ನು ಹತ್ಯೆ ಮಾಡಲು ಮುಂದಾದ ವೇಳೆ ಇದನ್ನು ಗಮನಿಸಿದವರೊಬ್ಬರು ಆತನಿಗೆ ಬೂಟುಗಾಲಿನಲ್ಲಿ ಝಾಡಿಸಿ ಒದ್ದಿದ್ದಾರೆ. ಅಲ್ಲಿಯವರೆಗೆ ಇದನ್ನು ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದ ಜನ, ಇದರಿಂದ ಸ್ಪೂರ್ತಿಗೊಂಡು ಆತನನ್ನು ಅಟ್ಟಾಡಿಸಿಕೊಂಡು ಬಡಿದಿದ್ದಾರೆ.
ಈ ಘಟನೆ ಕೈರೋದಲ್ಲಿ ನಡೆದಿದ್ದು, ಏಕಾಏಕಿ ಸಾರ್ವಜನಿಕರು ತನ್ನ ವಿರುದ್ದ ತಿರುಗಿ ಬಿದ್ದಿದ್ದನ್ನು ಕಂಡ ಆತ, ಎದ್ದೇನೋ ಬಿದ್ದೇನೋ ಎಂಬಂತೆ ಅಲ್ಲಿಂದ ಓಡಿ ಪರಾರಿಯಾಗಿದ್ದಾನೆ. ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರು ತೋರಿದ ಸಮಯಪ್ರಜ್ಞೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.