ಬಾಂಗ್ಲಾದೇಶದ ಢಾಕಾದಲ್ಲಿನ ಬೇಕರಿ ಮೇಲೆ ದಾಳಿ ಮಾಡಿ 20 ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದವರ ಪೈಕಿ ನಾಲ್ವರ ಭಾವಚಿತ್ರ ಬಹಿರಂಗವಾಗಿದ್ದು, ಇವರುಗಳು ಉನ್ನತ ವ್ಯಾಸಂಗ ಮಾಡಿದ್ದರಲ್ಲದೇ ಶ್ರೀಮಂತ ಕುಟುಂಬಕ್ಕೆ ಸೇರಿದವರೆಂದು ಹೇಳಲಾಗಿದೆ.
ಶುಕ್ರವಾರ ರಾತ್ರಿ ಆರ್ಟಿಸನ್ ಬೇಕರಿ ಮೇಲೆ ದಾಳಿ ಮಾಡಿದ್ದ 7 ಮಂದಿ ಉಗ್ರರು ಬಹುತೇಕರನ್ನು ಒತ್ತೆಯಾಳಾಗಿರಿಸಿಕೊಂಡಿದ್ದರು. ಈ ಪೈಕಿ ಬಾಂಗ್ಲಾ ದೇಶಿಯರು ಹಾಗೂ ಕುರಾನ್ ಪಠಣ ಮಾಡಿದವರನ್ನು ಬಿಡುಗಡೆಗೊಳಿಸಿ 20 ಮಂದಿಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದರು.
7 ಮಂದಿಯ ಪೈಕಿ 6 ಮಂದಿಯನ್ನು ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಿದ್ದ ಬಾಂಗ್ಲಾ ಪೊಲೀಸರು ಒಬ್ಬನನ್ನು ಜೀವಂತವಾಗಿ ಸೆರೆ ಹಿಡಿದಿದ್ದಾರೆ ಎನ್ನಲಾಗಿದೆ. ಘಟನೆಯ ಹೊಣೆ ಹೊತ್ತಿರುವ ಐಸಿಸ್ ಸಂಘಟನೆ, ದಾಳಿ ಮಾಡಿದವರ ಫೋಟೋಗಳನ್ನು ಬಿಡುಗಡೆ ಮಾಡಿದ್ದು, ದಾಳಿಕೋರರೆಲ್ಲರೂ ಬಾಂಗ್ಲಾದೇಶದವರೇ ಆಗಿದ್ದಾರೆ.