ಮೈಸೂರು: ಬಸ್ ಡಿಕ್ಕಿ ಹೊಡೆದರೂ, ಯುವಕನೊಬ್ಬ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಮೈಸೂರಿನಲ್ಲಿ ನಡೆದಿದೆ. ಘಟನೆಯ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ನೋಡುಗರನ್ನು ಬೆಚ್ಚಿ ಬೀಳಿಸುವಂತಿವೆ. ಪ್ರಕರಣದ ವರದಿ ಇಲ್ಲಿದೆ ನೋಡಿ.
ಮೈಸೂರಿನ ಲಷ್ಕರ್ ಮೊಹಲ್ಲಾ ಅಶೋಕ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಸಂತೋಷ್ ಕುಮಾರ್ ಎಂಬಾತ ನಡೆದುಕೊಂಡು ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ಸಾರಿಗೆ ಬಸ್ ಚಾಲಕ ಅದೇ ವೇಗದಲ್ಲಿ ತಿರುವು ಪಡೆದುಕೊಂಡಿದ್ದಾನೆ. ಈ ಸಂದರ್ಭದಲ್ಲಿ ಸಂತೋಷ್ ಮೇಲೆಯೇ ಬಸ್ ಹರಿದಿದೆ. ಅದೃಷ್ಟವಶಾತ್ ಸಂತೋಷ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ಬಸ್ ತಗುಲಿ ತೀವ್ರವಾಗಿ ಗಾಯಗೊಂಡಿದ್ದು, ಮೈಸೂರಿನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಬಸ್ ಚಾಲಕ ಹಾಗೂ ನಿರ್ವಾಹಕ ಗಾಯಾಳು ಸಂತೋಷ್ ನನ್ನು ಆಸ್ಪತ್ರೆಗೆ ಸೇರಿಸಲು ಮೊದಲಿಗೆ ಹಿಂದೇಟು ಹಾಕಿದರೂ, ನಂತರ ಸೇರಿಸಿದ್ದಾರೆ ಎನ್ನಲಾಗಿದೆ. ಬಸ್ ಡಿಕ್ಕಿ ಹೊಡೆಯುವ ದೃಶ್ಯ ಸರ್ಕಲ್ ನಲ್ಲಿ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಲಷ್ಕರ್ ಮೊಹಲ್ಲಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಜರುಗಿಸಿದ್ದಾರೆ.