ಕಳೆದ 20 ವರ್ಷಗಳಿಂದಲೂ ಬಾಂಗ್ಲಾದೇಶದ ಢಾಕಾದಲ್ಲಿ ನೆಲೆಸಿದ್ದ ಭಾರತೀಯ ಮೂಲದ ಸಂಜೀವ್ ಜೈನ್ ಕುಟುಂಬದ ಪಾಲಿಗೆ ಶನಿವಾರ ಕರಾಳ ದಿನವಾಗಿತ್ತು. ಅಮೆರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂಜೀವ್ ಜೈನ್ ಅವರ ಪುತ್ರಿ 19 ವರ್ಷದ ತಾರಿಶಿ ಜೈನ್, ರಜೆ ಕಳೆಯಲೆಂದು ಕೆಲ ದಿನಗಳ ಹಿಂದಷ್ಟೇ ಢಾಕಾಕ್ಕೆ ಬಂದಿದ್ದು ಐಸಿಸ್ ಉಗ್ರರು ನಡೆಸಿದ ದಾಳಿಗೆ ಬಲಿಯಾಗಿದ್ದಾಳೆ.
ತಾರಿಣಿ ಜೈನ್ ವಾಪಾಸ್ ಅಮೆರಿಕಾಗೆ ಹೋಗುವ ಮುನ್ನ ಭಾರತಕ್ಕೆ ಬಂದು ತಮ್ಮ ಬಂಧು- ಬಾಂಧವರನ್ನು ಭೇಟಿ ಮಾಡುವ ಇರಾದೆ ಹೊಂದಿದ್ದ ಸಂಜೀವ್ ಜೈನ್ ಕುಟುಂಬ, ಈಗ ಆಕೆಯ ಮೃತದೇಹವನ್ನು ಭಾರತಕ್ಕೆ ತಂದು ಅಂತ್ಯ ಸಂಸ್ಕಾರ ನಡೆಸುವಂತಾಗಿದೆ.
ಢಾಕಾದಲ್ಲಿಯೇ ಹುಟ್ಟಿ ಬೆಳೆದಿದ್ದ ತಾರಿಣಿ ಜೈನ್, ತಮ್ಮ ನಿವಾಸದ ಸಮೀಪದಲ್ಲಿಯೇ ಇದ್ದ ಆರ್ಟಿಸನ್ ಬೇಕರಿಗೆ ಸ್ನೇಹಿತರಾದ ಅಬಿಂತಾ ಕಬೀರ್ ಹಾಗೂ ಫರ್ರಾಜ್ ಅಯಾಜ್ ಹುಸೇನ್ ಜೊತೆ ತೆರಳಿದ್ದು, ಮೂವರೂ ಉಗ್ರರ ಪೈಶಾಚಿಕ ಕೃತ್ಯಕ್ಕೆ ಬಲಿಯಾಗಿದ್ದಾರೆ. ಆರ್ಟಿಸನ್ ಬೇಕರಿಗೆ ನುಗ್ಗಿರುವ ಉಗ್ರರು ಹಲವರನ್ನು ಒತ್ತೆಯಾಳಾಗಿರಿಸಿಕೊಂಡಿದ್ದಾರೆಂಬ ಮಾಹಿತಿ ಅರಿತ ಸಂಜೀವ್ ಜೈನ್, ಕೂಡಲೇ ಅಲ್ಲಿಗೆ ಧಾವಿಸಿದ್ದಾರೆ. ಅವರು ಹೊರಗಡೆ ಇದ್ದ ಸಂದರ್ಭದಲ್ಲಿ ಅವರ ಮೊಬೈಲ್ ಗೆ ಕರೆ ಮಾಡಿದ ತಾರಿಶಿ ಜೈನ್, ಉಗ್ರರು ಒಬ್ಬೊಬ್ಬರನ್ನಾಗಿ ಕೊಲ್ಲುತ್ತಿದ್ದಾರೆ. ನಾವುಗಳು ಬದುಕಿ ಬರುವ ಭರವಸೆಯಿಲ್ಲ ಪಪ್ಪಾ ಎಂದಿದ್ದಾಳೆ. ತಮ್ಮ ಮನೆ ಮಗಳನ್ನು ಕಳೆದುಕೊಂಡಿರುವ ತಾರಿಶಿ ಕುಟುಂಬ ಈಗ ಶೋಕ ಸಾಗರದಲ್ಲಿ ಮುಳುಗಿದ್ದು ಆಕೆಯ ಅಂತ್ಯ ಸಂಸ್ಕಾರವನ್ನು ಭಾರತದಲ್ಲೇ ನೆರವೇರಿಸಲು ತೀರ್ಮಾನಿಸಿದೆ.