ಜೈಪುರ: ಅಣ್ಣ-ತಂಗಿ ಬಾಂಧವ್ಯಕ್ಕೆ ಸಾಟಿ ಇಲ್ಲ. ಅಣ್ಣತಮ್ಮಂದಿರ ನಡುವೆ ಕಲಹ ನಡೆಯಬಹುದು. ಆದರೆ, ಅಣ್ಣ, ತಂಗಿಯ ನಡುವೆ ಜಗಳ ನಡೆಯುವುದು ಅಪರೂಪ. ಹೀಗೆ ಅಣ್ಣನ ಮೇಲೆ ಅತಿಯಾದ ಅಕ್ಕರೆ ಹೊಂದಿದ್ದ ಮಹಿಳೆಯೊಬ್ಬಳು ಆತನ ಸಾವನ್ನು ಸಹಿಸಿಕೊಳ್ಳದೇ ಏನು ಮಾಡಿದ್ದಾಳೆ ನೋಡಿ.
ಅಣ್ಣನ ಮೇಲೆ ಅಪಾರ ಪ್ರೀತಿ, ಗೌರವ ಇಟ್ಟುಕೊಂಡಿದ್ದ ಮಹಿಳೆಯೊಬ್ಬಳು, ಆತನ ಸಾವಿನ ನೋವನ್ನು ಸಹಿಸಿಕೊಳ್ಳದೇ, ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಸ್ತಾನದ ಸತಿರಾಂಪುರ ಗ್ರಾಮದಲ್ಲಿ ನಡೆದಿದೆ. 28 ವರ್ಷದ ದುರ್ಗಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಈಕೆಯ ಅಣ್ಣ 35 ವರ್ಷದ ವೇಲಾ ರಾಮ್ ಮನತ್ ಅಪಘಾತದಲ್ಲಿ ಮೃತಪಟ್ಟಿದ್ದು, ಬಂಧು ಬಾಂಧವರೆಲ್ಲಾ ಸೇರಿ ಅಂತ್ಯಸಂಸ್ಕಾರ ನಡೆಸಿದ್ದಾರೆ. ಈ ಸಂದರ್ಭದಲ್ಲಿ ದುಃಖ ತಡೆಯಲಾಗದೇ, ದುರ್ಗಾ ಅಣ್ಣನ ಚಿತೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ.
ಅಣ್ಣನ ಚಿತೆಗೆ ಹಾರಿ ತೀವ್ರ ಸುಟ್ಟಗಾಯಗಳಾಗಿದ್ದ ದುರ್ಗಾಳನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ, ಈ ವೇಳೆಗೆ ಆಕೆ ಮೃತಪಟ್ಟಿದ್ದಾಳೆ. ಬಳಿಕ ಅಣ್ಣನ ಅಂತ್ಯ ಸಂಸ್ಕಾರಕ್ಕೆ ಬಂದವರು ಆತನ ಚಿತೆಯ ಪಕ್ಕದಲ್ಲೇ ತಂಗಿಯ ಅಂತ್ಯಸಂಸ್ಕಾರವನ್ನೂ ನೆರವೇರಿಸಿದ್ದಾರೆ. 3 ಮಕ್ಕಳ ತಾಯಿಯಾಗಿರುವ ದುರ್ಗಾ ಕೆಲ ವರ್ಷಗಳಿಂದ ಸಹೋದರನ ಮನೆಯಲ್ಲಿ ವಾಸವಾಗಿದ್ದಳು.