ನವದೆಹಲಿ: ಕಳೆದ 2 ತಿಂಗಳ ಅವಧಿಯಲ್ಲಿ ಹಲವು ಬಾರಿ ಏರಿಕೆಯಾಗಿ ವಾಹನ ಸವಾರರ ಗೊಣಗಾಟಕ್ಕೆ ಕಾರಣವಾಗಿದ್ದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಗುರುವಾರ ಮಧ್ಯರಾತ್ರಿಯಿಂದಲೇ ನೂತನ ದರ ಜಾರಿಗೆ ಬಂದಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆ ಏರಿಳಿತ ಗಮನಿಸಿ, ತೈಲ ಕಂಪನಿಗಳು ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಪರಿಷ್ಕರಿಸುತ್ತವೆ. ಅದರಂತೆ ಪೆಟ್ರೋಲ್ ಲೀಟರ್ ಗೆ 89 ಪೈಸೆ, ಡೀಸೆಲ್ ಲೀಟರ್ ಗೆ 49 ಪೈಸೆ ಇಳಿಕೆ ಮಾಡಲಾಗಿದೆ. 2 ತಿಂಗಳ ನಂತರದಲ್ಲಿ ತೈಲ ಬೆಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆ ಮಾಡಲಾಗಿದೆ. ಏರಿಕೆ ಮಾಡುವಾಗ, ರೂಪಾಯಿ ಲೆಕ್ಕದಲ್ಲಿ ಹೆಚ್ಚಳ ಮಾಡುವ ತೈಲ ಕಂಪನಿಗಳು, ಇಳಿಕೆ ಮಾಡುವ ಸಂದರ್ಭದಲ್ಲಿ ಪೈಸೆಗಳ ಲೆಕ್ಕದಲ್ಲಿ ಇಳಿಕೆ ಮಾಡಿವೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಜೀವನ ನಡೆಸುವುದೇ ಕಷ್ಟ ಸಾಧ್ಯ. ಇಂತಹ ಸಂದರ್ಭದಲ್ಲಿ ಪದೇ, ಪದೇ ಬೆಲೆ ಏರಿಕೆ ಮಾಡುವ ಮೂಲಕ, ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತವೆ. ಇತ್ತೀಚಿನ ದಿನಗಳಲ್ಲಿ ತೈಲ ಬೆಲೆ ಏರುಗತಿಯಲ್ಲಿದ್ದು, ಈಗ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ.