ವೆಲ್ಲೂರು: ಉದ್ಯೋಗ ಖಾತರಿ ಯೋಜನೆಯಡಿ ಕೆರೆ ಹೂಳೆತ್ತಲು ಹೋಗಿದ್ದ ಕಾರ್ಮಿಕರಿಗೆ ಚಿನ್ನ ಸಿಕ್ಕ ಘಟನೆ ವೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ. ಕೆರೆ ಹೂಳೆತ್ತುವ ಸಂದರ್ಭದಲ್ಲಿ ಸುಮಾರು 500 ವರ್ಷ ಹಳೆಯ ಚಿನ್ನಾಭರಣ ದೊರೆತಿದ್ದು, ಅವನ್ನು ಜಿಲ್ಲಾ ಖಜಾನೆಯಲ್ಲಿಡಲಾಗಿದೆ.
ವೆಲ್ಲೂರು ಜಿಲ್ಲೆಯ ಪಪ್ಪೇನೇರಿ ಎಂಬಲ್ಲಿ ಉದ್ಯೋಗ ಖಾತರಿ ಯೋಜನೆಯಡಿ 131 ಮಂದಿ ಕೆಲಸಕ್ಕೆ ನೋಂದಾಯಿಸಿದ್ದು, ಕೆರೆ ಹೂಳೆತ್ತುವ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬನಿಗೆ ಚಿನ್ನದ ಸರವೊಂದು ಸಿಕ್ಕಿದೆ. ಅದಾದ 2 ದಿನಗಳ ನಂತರ 3 ಚಿನ್ನದ ಸರಗಳು ದೊರೆತಿವೆ. ಈ ಕೆರೆಯಲ್ಲಿ ನೀರು ಖಾಲಿಯಾಗಿದ್ದರಿಂದ ಹೂಳೆತ್ತುವ ಕಾಮಗಾರಿ ನಡೆಸಲಾಗುತ್ತಿದ್ದು, ಚಿನ್ನದ ಸರಗಳು ಸಿಕ್ಕಿವೆ ಎಂಬ ಸುದ್ದಿ ಹರಡಿ ಕೆರೆಯಲ್ಲಿ ಹೂಳೆತ್ತುವ ಕೆಲಸ ಮಾಡಲು ಜನ ಮುಗಿಬಿದ್ದಿದ್ದಾರೆ.
ಚಿನ್ನ ಹುಡುಕಲು ಜನ ಹೂಳೆತ್ತುವ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಕೆರೆಯಲ್ಲಿ ದೊರೆತಿರುವ ಚಿನ್ನದ ಸರ ಸುಮಾರು 500 ವರ್ಷ ಹಳೆಯದೆನ್ನಲಾಗಿದೆ. ಅವುಗಳನ್ನು ಜಿಲ್ಲಾ ಖಜಾನೆಗೆ ಹಸ್ತಾಂತರಿಸಲಾಗಿದೆ. ಕಂದಾಯ ಹಾಗೂ ಪುರಾತತ್ವ ಇಲಾಖೆಯಿಂದ ಪರಿಶೀಲನೆ ನಡೆಸಲಾಗುವುದೆಂದು ಹೇಳಲಾಗಿದೆ.