ಕರಾಚಿ: ಪಾಕಿಸ್ತಾನದಲ್ಲಿ ದುಷ್ಕರ್ಮಿಗಳ ಅಟ್ಟಹಾಸ ಮಿತಿ ಮೀರಿದೆ. ಇತ್ತೀಚೆಗಷ್ಟೇ ಖ್ಯಾತ ಖವಾಲಿ ಗಾಯಕರೊಬ್ಬರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿ ಹತ್ಯೆಗೈದ ಘಟನೆ ಹಸಿರಾಗಿರುವಾಗಲೇ, ಮತ್ತೊಂದು ಘಟನೆ ಮರುಕಳಿಸಿದೆ.
ಪಾಕಿಸ್ತಾನದ ನಟ ಹಾಗೂ ಟಿ.ವಿ. ವಾಹಿನಿಯಲ್ಲಿ ನಿರೂಪಕರಾಗಿರುವ ನದೀಮ್ ಜಾಫ್ರಿ ಅವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಘಟನೆ ವರದಿಯಾಗಿದೆ. ಕರಾಚಿಯ ಗುಲ್ಷನ್ ಇ ಇಕ್ಬಾಲ್ ಪ್ರದೇಶದಲ್ಲಿ ನದೀಮ್ ಜಾಫ್ರಿ ಅವರ ಮನೆ ಇದ್ದು, ಮನೆ ಎದುರಿನಲ್ಲೇ ಅವರ ಮೇಲೆ ದಾಳಿ ಮಾಡಿದ್ದು, ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ದರೋಡೆ ನಡೆಸಲು ಬಂದಿದ್ದ ದುಷ್ಕರ್ಮಿಗಳು, ನದೀಮ್ ಮೇಲೆ ಫೈರಿಂಗ್ ಮಾಡಿದ್ದಾರೆ.
‘ರಾಂಗ್ ನಂಬರ್’ ಖ್ಯಾತಿಯ ನಟ ನದೀಮ್ ಜಾಫ್ರಿ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ. ಇತ್ತೀಚೆಗಷ್ಟೇ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಗಾಯಕ ಅಮ್ಜದ್ ಸಾಬರಿ ಮೃತಪಟ್ಟಿದ್ದರು.