ಹೊಸಪೇಟೆಯಿಂದ ಹರಿಹರಕ್ಕೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ನಾಗರ ಹಾವು ಕಂಡು ಬಂದ ವೇಳೆ ಪ್ರಯಾಣಿಕರು ಆತಂಕಕ್ಕೊಳಗಾದ ಘಟನೆ ಇಂದು ನಡೆದಿದೆ.
ಹರಿಹರದ ಬಳಿ ಬಸ್ ಬರುತ್ತಿದ್ದಾಗ ಬಸ್ ನ ಹಿಂಬದಿ ಸೀಟ್ ಹತ್ತಿರ ನಾಗರ ಹಾವು ಹರಿದಾಡುತ್ತಿರುವುದು ಕಂಡು ಬಂದಿದ್ದು, ಪ್ರಯಾಣಿಕರು ಕೂಗಿ ಈ ವಿಚಾರ ಚಾಲಕನಿಗೆ ತಿಳಿಸಿದ್ದಾರೆ. ಕೂಡಲೇ ಬಸ್ ನಿಲ್ಲಿಸಲಾಗಿದ್ದು, ಪ್ರಯಾಣಿಕರೆಲ್ಲರೂ ಕೂಡಲೇ ಕೆಳಗಿಳಿದಿದ್ದಾರೆ.
ಬಳಿಕ ಈ ಬಸ್ ನಲ್ಲಿದ್ದ 28 ಮಂದಿ ಪ್ರಯಾಣಿಕರನ್ನು ಮತ್ತೊಂದು ಬಸ್ ನಲ್ಲಿ ಕಳುಹಿಸಿಕೊಡಲಾಗಿದ್ದು, ಅಲ್ಲಿಯೇ ಇದ್ದ ಕುರಿಗಾಹಿಯೊಬ್ಬ ಹಾವನ್ನು ಹಿಡಿದು ಹೊರ ಬಿಟ್ಟ ವೇಳೆ ನಿಟ್ಟುಸಿರು ಬಿಟ್ಟ ಚಾಲಕ, ಹರಿಹರಕ್ಕೆ ಬಸ್ ಚಾಲನೆ ಮಾಡಿಕೊಂಡು ಬಂದಿದ್ದಾರೆ.