ರೆಬೆಲ್ ಸ್ಟಾರ್ ಅಂಬರೀಷ್ ಸಚಿವ ಸಂಪುಟದಿಂದ ನಿರ್ಗಮಿಸುತ್ತಿದ್ದಂತೆಯೇ ಮಂಡ್ಯದಲ್ಲಿರುವ ಮಾಜಿ ಸಂಸದೆ ರಮ್ಯಾ ಅವರ ನಿವಾಸ ನವೀಕರಣಗೊಳ್ಳುತ್ತಿರುವುದು ಕುತೂಹಲ ಮೂಡಿಸಿದ್ದು, ರಮ್ಯಾ ಸಚಿವ ಸಂಪುಟ ಸೇರಲಿದ್ದಾರೆಯೇ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ತಾವು ಮಂಡ್ಯದಲ್ಲೇ ನೆಲೆಸುವುದಾಗಿ ಹೇಳಿದ್ದ ರಮ್ಯಾ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದರು. ಚುನಾವಣೆಯಲ್ಲಿ ಪರಾಭವಗೊಳ್ಳುತ್ತಿದ್ದಂತೆಯೇ ವ್ಯಾಸಂಗಕ್ಕೆಂದು ವಿದೇಶಕ್ಕೆ ತೆರಳಿದ್ದ ರಮ್ಯಾ, ಬಹು ಕಾಲ ಮಂಡ್ಯಕ್ಕೆ ಆಗಮಿಸಿರಲಿಲ್ಲ.
ಆ ನಂತರ ಬಂದಿದ್ದ ರಮ್ಯಾ, ಮಂಡ್ಯಕ್ಕೆ ಭೇಟಿ ನೀಡಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದರು. ಅಲ್ಲದೇ ರಾಜಕೀಯದಲ್ಲೂ ಸಕ್ರಿಯರಾಗಿದ್ದರು. ಇದೀಗ ಅಂಬರೀಷ್ ಅವರ ಸಚಿವ ಸ್ಥಾನ ತಪ್ಪಲು ರಮ್ಯಾ ಅವರೇ ಕಾರಣರೆಂಬ ಮಾತುಗಳು ಕೇಳಿ ಬರುತ್ತಿರುವ ಮಧ್ಯೆ, ಅವರ ಮಂಡ್ಯ ನಿವಾಸ ನವೀಕರಣಗೊಳ್ಳುತ್ತಿರುವುದು ಸಾರ್ವಜನಿಕ ವಲಯದಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ರಮ್ಯಾ ಸಚಿವ ಸಂಪುಟ ಸೇರಲಿದ್ದಾರೆಂಬ ಮಾತುಗಳು ಕೇಳಿ ಬರುತ್ತಿದ್ದು, ಈ ಹಿನ್ನಲೆಯಲ್ಲಿ ಮಂಡ್ಯದಲ್ಲಿ ತಾವು ಬಾಡಿಗೆಗೆ ಪಡೆದಿದ್ದ ಮನೆಯನ್ನು ಕಛೇರಿಯನ್ನಾಗಿ ಮಾಡಿಕೊಳ್ಳಲಿದ್ದಾರೆಂದು ಹೇಳಲಾಗುತ್ತಿದೆ.