ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೊಸ ಹೊಸ ಪ್ರಯೋಗಗಳು, ಆವಿಷ್ಕಾರಗಳು ದಿನೇ ದಿನೇ ಹೆಚ್ಚುತ್ತಿವೆ. ಇದರಿಂದ ಅನೇಕ ಮಹತ್ವಪೂರ್ಣ ಬೆಳವಣಿಗೆಗಳು ಕೂಡ ಆಗುತ್ತಿವೆ. ಈ ಪಟ್ಟಿಗೆ ಮತ್ತೊಂದು ಹೊಸ ಸೇರ್ಪಡೆಯಾಗಿದೆ. ಅದೇ ಸ್ಟ್ರಾಟೋಲಾಂಚ್.
ಸ್ಟ್ರಾಟೋಲಾಂಚ್ ಜಗತ್ತಿನ ಬೃಹತ್ ಸ್ಪೇಸ್ ಜೆಟ್. ಇದನ್ನು ಸ್ಕೇಲ್ಡ್ ಸಮ್ಮಿಶ್ರಣದಿಂದ ನಿರ್ಮಿಸಲಾಗಿದ್ದು ಇದರ ತೂಕ 5.44 ಲಕ್ಷ ಕಿಲೋ. ಇದರ ರೆಕ್ಕೆಗಳು 385 ಅಡಿ ಉದ್ದವಿದೆ. 50 ಅಡಿ ಎತ್ತರದ ಜೆಟ್ ಬಾಲ, ಎರಡು ಬಾಡಿಯ ಕ್ಯಾರಿಯರ್, ಆರು 747 ಜೆಟ್ ವಿಮಾನದ ಇಂಜಿನ್ ಗಳು ಇದೆ. 129 ಅಡಿ ಉದ್ದದ ರಾಕೆಟ್ ಬೂಸ್ಟರ್ 6124 ಕಿಲೋ ತೂಕದ ಉಪಗ್ರಹ ಸಾಗಿಸುವ ಸಾಮರ್ಥ್ಯ ಹೊಂದಿದೆ. ಎರಡು ಹಂತದ ರಾಕೆಟ್ ಬೂಸ್ಟರ್ ಇದ್ದು ಇದು ಜೆಟ್ ನಿಂದ ಪ್ರತ್ಯೇಕಗೊಂಡು ಬಾಹ್ಯಾಕಾಶಕ್ಕೆ ಚಿಮ್ಮುತ್ತದೆ. ಈ ಗಗನನೌಕೆ 9100 ಮೀಟರ್ ಎತ್ತರಕ್ಕೆ ಹಾರಿ ಉಪಗ್ರಹಗಳನ್ನು ಹೊಂದಿರುವ ರಾಕೆಟ್ ಅನ್ನು ಉಡಾವಣೆ ಮಾಡಿ ವಾಪಸ್ ಬಂದು ವಾಯುನೆಲೆಯಲ್ಲಿ ಇಳಿಯುತ್ತದೆ.
ಸ್ಟ್ರಾಟೋಲಾಂಚ್ ಪ್ರಾಜೆಕ್ಟ್ 2010ರಲ್ಲೇ ಆರಂಭವಾಗಿದೆ. ವಲ್ಕನ್ ಏರೋಸ್ಪೇಸ್ ಎಂಬ ಕಂಪನಿ ಕಳೆದ ವಾರ ಇದರ ಮೊದಲ ಗ್ರಾಫಿಕ್ ಚಿತ್ರವನ್ನು ಬಿಡುಗಡೆ ಮಾಡಿದೆ. ಮೈಕ್ರೋಸಾಫ್ಟ್ ನ ಸಹಸಂಸ್ಥಾಪಕ ಪೌಲ್ ಅಲೆನ್ ಹಾಗೂ ಬ್ರಟ್ ರುಟನ್ ಇದರ ರುವಾರಿಗಳು.