ಬೆಂಗಳೂರು: ರಸ್ತೆ ಬದಿ ನಿಂತಿದ್ದ ಕಂಟೇನರ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ, ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ, ದಾಬಸ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಹುಬ್ಬಳ್ಳಿ ಸಮೀಪದ ನರಗುಂದ ಮೂಲದ ಒಂದೇ ಕುಟುಂಬಕ್ಕೆ ಸೇರಿದ ಸದಸ್ಯರು ಕಾರಿನಲ್ಲಿ ಬೆಂಗಳೂರಿಗೆ ಹೊರಟಿದ್ದರು. ಈ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು, ರಸ್ತೆ ಬದಿ ನಿಂತಿದ್ದ ಕಂಟೇನರ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಅದರಲ್ಲಿದ್ದ ಇಬ್ಬರು ಮಹಿಳೆಯರು, ಇಬ್ಬರು ಪುರುಷರು ಹಾಗೂ ಒಂದು ಮಗು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಅಪಘಾತದಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ನೆಲಮಂಗಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ದೂರದವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅಪಘಾತದ ವಾಹನವನ್ನು ತೆರವುಗೊಳಿಸಿದ ನಂತರ, ಪರಿಸ್ಥಿತಿ ತಿಳಿಯಾಗಿದೆ. ಬೆಳಿಗ್ಗೆ 6 ಗಂಟೆಯ ನಂತರ ನಗರದೊಳಗೆ ಕಂಟೇನರ್ ಗಳಿಗೆ ಪ್ರವೇಶವಿಲ್ಲದ ಕಾರಣ, ರಸ್ತೆ ಬದಿಯಲ್ಲಿಯೇ ನಿಲ್ಲಿಸಲಾಗುತ್ತದೆ. ಇದರಿಂದಾಗಿ ಆಗಾಗ ಇಂತಹ ಘಟನೆ ಮರುಕಳಿಸುತ್ತವೆ ಎಂದು ಹೇಳಲಾಗಿದೆ.