ಹೈದರಾಬಾದ್: ಪೂಜೆ ಮಾಡುವ ನೆಪದಲ್ಲಿ ಉದ್ಯಮಿಯೊಬ್ಬರಿಗೆ ಪ್ರಜ್ಞೆ ತಪ್ಪಿಸಿ, ಬರೋಬ್ಬರಿ 1.33 ಕೋಟಿ ರೂ ಹಣದೊಂದಿಗೆ ಪರಾರಿಯಾದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಇಲ್ಲಿನ ಉದ್ಯಮಿ ಮಧುಸೂದನ ರೆಡ್ಡಿ ವಂಚನೆಗೆ ಒಳಗಾದವರು.
ಕರ್ನಾಟಕ ಮೂಲದ ಶಿವಸ್ವಾಮಿ ಎಂಬ ವ್ಯಕ್ತಿಯೊಬ್ಬ ಇವರ ಮನೆಯಲ್ಲಿ ಮೃತ್ಯುಂಜಯ ಹೋಮ ಮಾಡುವುದಾಗಿ ಬಂದಿದ್ದು, ಮನೆಯ ಮೊದಲ ಮಹಡಿಯಲ್ಲಿ ಪೂಜೆಯನ್ನು ಆರಂಭಿಸಿದ್ದಾನೆ. ಆ ನಂತರ ಪೂಜೆಗೆ ಬೇಕೆಂದು ಮನೆಯಲ್ಲಿದ್ದ ಹಣವನ್ನೆಲ್ಲಾ ತರಿಸಿಕೊಂಡಿದ್ದಾನೆ. ವಂಚಕನ ಮಾತು ನಂಬಿದ ಮಧುಸೂದನ ರೆಡ್ಡಿ, ಮನೆಯಲ್ಲಿದ್ದ 1.33 ಕೋಟಿ ರೂ. ಹಣವನ್ನು ಚೀಲದಲ್ಲಿ ತಂದು ಪೂಜೆ ಮಾಡುತ್ತಿದ್ದ ಸ್ಥಳದಲ್ಲಿ ಇಟ್ಟಿದ್ದಾರೆ. ಮಧುಸೂದನ ರೆಡ್ಡಿ, ಅವರ ಪತ್ನಿ ಹಾಗೂ ಪುತ್ರನಿಗೆ ಮತ್ತು ಬರುವ ಪ್ರಸಾದ ಕೊಟ್ಟ ಶಿವಸ್ವಾಮಿ ತಿನ್ನಲು ಹೇಳಿದ್ದಾನೆ.
ಪ್ರಸಾದ ತಿಂದ ರೆಡ್ಡಿ ಕುಟುಂಬದವರು ಪ್ರಜ್ಞೆ ತಪ್ಪಿ ಬಿದ್ದಿದ್ದು, ಆಗ ಶಿವಸ್ವಾಮಿ ಹಣದೊಂದಿಗೆ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಂಚಕನ ಕಾರು ಚಾಲಕನನ್ನು ಬಂಧಿಸಿದ್ದು, ಶಿವಸ್ವಾಮಿಯ ಪತ್ತೆಗೆ ಬಲೆ ಬೀಸಿದ್ದಾರೆ ಎಂದು ಹೇಳಲಾಗಿದೆ.