ನವದೆಹಲಿ: ವೆಬ್ ಸೈಟ್ ಗಳಲ್ಲಿ ಕಾಣಸಿಗುವ ಅನೇಕ ರೀತಿಯ ಅಶ್ಲೀಲ ವಿಡಿಯೋಗಳು ರದ್ದಾಗಲಿವೆ. ಈ ವಿಷಯದ ಕುರಿತು ಗಂಭೀರ ಚಿಂತನೆ ನಡೆಸಿರುವ ಕೇಂದ್ರ ಸರಕಾರ, ಎಸ್ಕಾರ್ಟ್ ಸೇವೆ ಹೆಸರಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿರುವ 240 ವೆಬ್ ಸೈಟ್ ಗಳನ್ನು ರದ್ದುಪಡಿಸಲು ನಿರ್ದೇಶಿಸಿದೆ ಎನ್ನಲಾಗಿದೆ.
ಕಳೆದ ವರ್ಷ ಕೂಡ ಅಶ್ಲೀಲ ಚಿತ್ರಗಳನ್ನು ತಮ್ಮ ವೆಬ್ ಸೈಟ್ ಗಳಲ್ಲಿ ಪ್ರಸಾರ ಮಾಡುತ್ತಿದ್ದ ಹಿನ್ನಲೆಯಲ್ಲಿ ಕೆಲವು ವೆಬ್ ಸೈಟ್ ಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗಿತ್ತು. ಸರಕಾರದ ಈ ನಿರ್ಧಾರಕ್ಕೆ ತೀವ್ರ ವಿರೋಧ ಕೂಡ ವ್ಯಕ್ತವಾಗಿತ್ತು.
ಕಾನೂನಿಗೆ ವಿರುದ್ಧವಾಗಿ ಮತ್ತು ಅಕ್ರಮ ವ್ಯಾಪಾರದ ಶ್ರೇಣಿಗೆ ಸೇರುವ ಎಸ್ಕಾರ್ಟ್ ಸೇವೆಯನ್ನು ಇಂದು ಅನೇಕ ವೆಬ್ ಸೈಟ್ ಗಳು ನಡೆಸುತ್ತಿವೆ. ಇದಕ್ಕೆ ನಿಷೇಧ ಹೇರುವ ಅವಶ್ಯಕತೆ ಇದೆ. ಸರಕಾರದ ಈ ಕ್ರಮದಿಂದ ಇಂತಹ ವೆಬ್ ಸೈಟ್ ಗಳು ಸಂಪೂರ್ಣವಾಗಿ ಮುಚ್ಚುತ್ತವೆಯೋ ಎಂಬುದನ್ನು ಕಾದುನೋಡಬೇಕಿದೆ.