ಮಹಿಳೆಯೊಬ್ಬಳು ಅಪ್ರಾಪ್ತ ವಯಸ್ಸಿನ ಮಗಳ ವಿವಾಹವನ್ನು ತನ್ನ ಪ್ರೇಮಿಯ ಜೊತೆ ಮಾಡಲು ಮುಂದಾದ ವೇಳೆ ಪೊಲೀಸರ ಮೊರೆ ಹೋದ ಮಹಿಳೆಯ ತಾಯಿ, ಮೊಮ್ಮಗಳ ವಿವಾಹವನ್ನು ನಿಲ್ಲಿಸಿದ ಘಟನೆ ಚೆನ್ನೈನಲ್ಲಿ ನಡೆದಿದೆ.
ಕಲಾ ಎಂಬಾಕೆ ಬಹಳ ವರ್ಷಗಳ ಹಿಂದೆಯೇ ತನ್ನ ಪತಿಯನ್ನು ಕಳೆದುಕೊಂಡಿದ್ದು, ಮಣಿಕಂದನ್ ಎಂಬವನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಕಲಾಳ ಮೊದಲ ಪತಿಯ 15 ವರ್ಷದ ಮಗಳ ಮೇಲೆ ಕಣ್ಣು ಹಾಕಿದ್ದ ಮಣಿಕಂದನ್, ಆಕೆಯ ವಿವಾಹವನ್ನು ತನ್ನೊಂದಿಗೆ ಮಾಡಿಕೊಡುವಂತೆ ದುಂಬಾಲು ಬಿದ್ದಿದ್ದ.
ಮಣಿಕಂದನ್ ಹಣಕಾಸಿನ ನೆರವು ನೀಡುತ್ತಿದ್ದ ಕಾರಣ ಕಲಾ ಕೂಡಾ ಇದಕ್ಕೆ ಒಪ್ಪಿಗೆ ನೀಡಿದ್ದು, ಮಗಳ ಮದುವೆಯನ್ನು ತನ್ನ ಪ್ರೇಮಿಯೊಂದಿಗೆ ನೆರವೇರಿಸಲು ಎಲ್ಲ ಸಿದ್ದತೆ ಮಾಡಿಕೊಂಡಿದ್ದಳು. ಆದರೆ ಈ ವಿವಾಹಕ್ಕೆ ಕಲಾಳ ತಾಯಿ ಅಮರಾವತಿಯ ಒಪ್ಪಿಗೆ ಇರಲಿಲ್ಲ. ಎಷ್ಟು ಹೇಳಿದರೂ ಈ ವಿವಾಹ ನಿಲ್ಲಿಸಲು ಮಗಳು ಒಪ್ಪದ ಕಾರಣ ಅನಿವಾರ್ಯವಾಗಿ ವೃದ್ದೆ, ಮಹಿಳಾ ಠಾಣೆಯ ಮೆಟ್ಟಿಲೇರಿದ್ದಾರೆ. ಪೊಲೀಸರ ನೆರವು ಪಡೆದು ಅಪ್ರಾಪ್ತ ಮೊಮ್ಮಗಳ ವಿವಾಹವನ್ನು ನಿಲ್ಲಿಸಿದ್ದಾರೆ. ಈಗ ಕಲಾ ಮತ್ತು ಮಣಿಕಂದನ್ ಅವರನ್ನು ಬಂಧಿಸಿರುವ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.