ಏಪ್ರಿಲ್ 28 ರಂದು ಕೇರಳದ ಪೆರುಂಬುವೂರಿನ ತನ್ನ ಮನೆಯಲ್ಲೇ ಅತ್ಯಾಚಾರಕ್ಕೊಳಗಾಗಿ ಭೀಕರವಾಗಿ ಹತ್ಯೆಗೀಡಾಗಿದ್ದ ಕಾನೂನು ವಿದ್ಯಾರ್ಥಿನಿ ಜಿಶಾ ಪ್ರಕರಣದಲ್ಲಿ ಪೊಲೀಸರಿಗೆ ಮಹತ್ವದ ಸುಳಿವು ಲಭ್ಯವಾಗಿದ್ದು, ಕೊಲೆಗಾರ ಬಲೆಗೆ ಬೀಳುವ ವಿಶ್ವಾಸವನ್ನು ಪೊಲೀಸರು ಹೊಂದಿದ್ದಾರೆ.
ಜಿಶಾ ಮನೆಯಿಂದ ಸ್ವಲ್ಪ ದೂರದಲ್ಲಿರುವ ಫರ್ಟಿಲೈಸರ್ ಅಂಗಡಿ ಬಳಿ ಅಳವಡಿಸಲಾಗಿದ್ದ ಸಿಸಿ ಟಿವಿಯಲ್ಲಿ ಘಟನೆ ನಡೆದ ದಿನದಂದು ಜಿಶಾ ತನ್ನ ಮನೆಗೆ ಹಿಂದಿರುಗುತ್ತಿದ್ದ ವೇಳೆ ಆಕೆಯ ಹಿಂದೆಯೇ ಹಳದಿ ಬಣ್ಣದ ಶರ್ಟ್ ಧರಿಸಿರುವ ವ್ಯಕ್ತಿಯೊಬ್ಬ ಹೋಗುತ್ತಿರುವ ದೃಶ್ಯ ಸೆರೆಯಾಗಿದೆ.
ಸಿಸಿ ಟಿವಿ ದೃಶ್ಯಾವಳಿಯಲ್ಲಿ ಆತನ ಮುಖ ಅಸ್ಪಷ್ಟವಾಗಿ ದಾಖಲಾಗಿದ್ದು, ಆತನೇ ಹಂತಕನಾಗಿರಬೇಕೆಂದು ಪೊಲೀಸರು ಶಂಕೆ ಹೊಂದಿದ್ದಾರೆ. ಆತ ಜಿಶಾಗೆ ಪರಿಚಿತನೇ ಅಥವಾ ಆಕೆ ಬಸ್ ನಿಂದ ಇಳಿದು ಮನೆಗೆ ತೆರಳುತ್ತಿದ್ದ ವೇಳೆ ಹಿಂಬಾಲಿಸಿಕೊಂಡು ಬಂದನೇ ಎಂಬುದರ ಕುರಿತು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆ ಶಂಕಿತ ವ್ಯಕ್ತಿಯ ರೇಖಾ ಚಿತ್ರವನ್ನು ರೂಪಿಸಿದ್ದ ವೇಳೆ ಒಬ್ಬನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದರಾದರೂ ಯಾವುದೇ ಮಾಹಿತಿ ದೊರೆತಿರಲಿಲ್ಲ. ಜಿಶಾ ಹತ್ಯೆಯಾಗಿ ಇಷ್ಟು ದಿನಗಳಾದರೂ ಆರೋಪಿಯ ಬಂಧನವಾಗದಿರುವುದಕ್ಕೆ ಖಂಡನೆ ವ್ಯಕ್ತವಾಗಿದ್ದು, ವಿದ್ಯಾರ್ಥಿಗಳು ಪ್ರತಿಭಟನೆಯನ್ನೂ ನಡೆಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಇದೀಗ ತಮಗೆ ದೊರೆತಿರುವ ಹೊಸ ಸುಳಿವಿನ ಆಧಾರದ ಮೇಲೆ ಹಂತಕನನ್ನು ಬಂಧಿಸುವ ವಿಶ್ವಾಸ ಹೊಂದಿದ್ದಾರೆ.